ಕಡಬ, ಜೂ. 20 (DaijiworldNews/AA): ಪತ್ನಿಯನ್ನು ಕೊಂದು ಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶನಿವಾರ ಮಧ್ಯಾಹ್ನ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಆಲಂಕಾರು ಕಜೆಯಲ್ಲಿ ನಡೆದಿದೆ.


ಆಲಂಕಾರು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದ ಬಜಗೋಳಿಯ ದಿನೇಶ್ ಹಾಗೂ ಸಿದ್ದಕಟ್ಟೆಯ ಸಂಗೀತ ದಂಪತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪತ್ನಿಯನ್ನು ಕೊಂದು ಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ದಂಪತಿ ಎರಡು ವರ್ಷದ ಹೆಣ್ಣು ಮಗುವಿನೊಂದಿಗೆ ವಾಸವಾಗಿದ್ದರು.
ಒಂದು ತಿಂಗಳ ಹಿಂದೆ ಆಲಂಕಾರು ಪೇಟೆಯ ಹೋಟೆಲ್ ಬಿಟ್ಟು ತೆರಳಿದ್ದ ಈ ದಂಪತಿ, ಜೂ.19ರ ಸಂಜೆ ಆಲಂಕಾರು ಕಜೆಯ ಬಾಡಿಗೆ ಮನೆಗೆ ಪುನಃ ಬಂದಿದ್ದರು. ಜೂ.20ರಂದು ದಂಪತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮನೆಯ ಒಳಗಿನ ಚಿಲಕ ಹಾಕಲಾಗಿತ್ತು. ಎರಡು ವರ್ಷದ ಹೆಣ್ಣು ಮಗು ಅತ್ತು ಮತ್ತೆ ನಿದ್ದೆಗೆ ಜಾರಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಕಡಬ ಪೊಲೀಸ್ ಉಪನಿರೀಕ್ಷಕ ಜಂಬುರಾಜ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.