ಕಾಸರಗೋಡು ಡಿ 26: ಅಕ್ರಮಗಳು ಹೆಚ್ಚಾಗುತ್ತಿವ ಹಿನ್ನಲೆಯಲ್ಲಿ ಇಲ್ಲಿನ ಅಬಕಾರಿ ತಂಡ ತನ್ನ ಕೆಲಸಗಳಿಗೆ ಚುರುಕುಮುಟ್ಟಿಸಿದ್ದು ಕರ್ನಾಟಕದಿಂದ ಕೇರಳಕ್ಕೆ ಸಾಗಿಸುತ್ತಿದ್ದ 1,04,95,500 ರೂ. ಕಾಳಧನ ಮತ್ತು ಹತ್ತು ಕಿಲೋ ಗಾಂಜಾವನ್ನು ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿ ಈ ಸಂಬಂಧ ಇಬ್ಬರನ್ನು ಸೆರೆ ಹಿಡಿಯಲಾಗಿದೆ.
ಇರಿಟ್ಟಿ ತಪಾಸಣಾ ಕೇಂದ್ರದಿಂದ ಈ ಮಾಲುಗಳನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ. ಕರ್ನಾಟಕದಿಂದ ಕೇರಳಕ್ಕೆ ಅಕ್ರಮವಾಗಿ ಮಾದಕದ್ರವ್ಯ ಮತ್ತು ಮದ್ಯ ಕಳ್ಳಸಾಗಾಟ ನಡೆಯುತ್ತಿರುವುದರ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟಲು ತಪಾಸಣಾ ಕೇಂದ್ರದಲ್ಲಿ ಅಬಕಾರಿ ತಂಡ ವಾಹನ ತಪಾಸಣೆಗೈಯ್ಯುತ್ತಿದ್ದ ವೇಳೆ ಆ ದಾರಿಯಾಗಿ ಕರ್ನಾಟಕದಿಂದ ಬರುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ಗೊಳಪಡಿಸಿದಾಗ ಕಾರಿನ ಸೀಟಿನ ಅಡಿ ಭಾಗದಲ್ಲಿ ಕಾಳಧನ ಬಚ್ಚಿಟ್ಟಿರುವುದನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಇವುಗಳೆಲ್ಲವೂ 2000 ಮತ್ತು 500 ರೂ.ಗಳ ನೋಟುಗಳಾಗಿವೆ. ಆ ಸಂಬಂಧ ಕಾರಿನಲ್ಲಿದ್ದ ಪೆರಿಂಙತ್ತೂರು ಅಣಿಯತ್ತರ ಯೋಗಿ ಮಠದ ಕಲ್ಲಿಂಗಲ್ ಮೆಹಮೂದ್(28) ಎಂಬಾತನನ್ನು ಹಣ ಸಹಿತ ಸೆರೆ ಹಿಡಿದು ಅಬಕಾರಿ ತಂಡ ಇರಿಟ್ಟಿ ಪೊಲೀಸರಿಗೆ ಹಸ್ತಾಂತರಿಸಿದೆ.
ಇದರ ಹೊರತಾಗಿ ಅಲ್ಲೇ ಪಕ್ಕದ ಕಳೆಯುತ್ತರ ತಪಾಸಣಾ ಕೇಂದ್ರದಲ್ಲಿ ಅಬಕಾರಿ ತಂಡ ನಡೆಸಿದ ಇನ್ನೊಂದು ಕಾರ್ಯಾಚರಣೆಯಲ್ಲಿ 10 ಕಿಲೋ ಗಾಂಜಾ ಸಹಿತ ಪರಪ್ಪನಂಗಾಡಿಯ ಮುಬಶೀರ್(23) ಎಂಬಾತನನ್ನು ಸೆರೆ ಹಿಡಿದಿದೆ. ಈತ ಕರ್ನಾಟಕದಿಂದ ಲಕ್ಸುರಿ ಬಸ್ಸಿನಲ್ಲಿ ಬರುತ್ತಿದ್ದ ವೇಳೆ ಆ ಬಸ್ಸನ್ನು ಅಬಕಾರಿ ತಂಡ ತಪಾಸಣೆಗೊಳಪಡಿಸಿ ದಾಗ ಮುಬಶೀರ್ ಕೈಯಲ್ಲಿ ಬ್ಯಾಗ್ ಹಿಡಿದು ಶಂಕಾಸ್ಪದ ರೀತಿಯಲ್ಲಿ ಕಂಡು ಬಂದಿದ್ದಾನೆ. ಅದರಿಂದಾಗಿ ಅಬಕಾರಿ ತಂಡ ಆತನ ಬ್ಯಾಗ್ನ್ನು ಪರಿಶೀಲಿಸಿದಾಗ ಅದರಲ್ಲಿ ಗಾಂಜಾ ಬಚ್ಚಿಟ್ಟಿರುವುದನ್ನು ಪತ್ತೆಹಚ್ಚಿ, ಗಾಂಜಾ ಸಹಿತ ಆತನನ್ನು ಬಂಧಿಸಿದ್ದಾರೆ. ಇದೇ ವೇಳೆ ತಾನು ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿಯಾಗಿರುವುದಾಗಿಯೂ ಅಲ್ಲಿ ಓರ್ವ ವ್ಯಕ್ತಿ ಈ ಮಾಲನ್ನು ತನ್ನ ಕೈಗೆ ನೀಡಿ ಮಲಪ್ಪುರಂನ ಓರ್ವ ವ್ಯಕ್ತಿಗೆ ನೀಡಿದ್ದಲ್ಲಿ ಆತ ೪೦೦೦ ರೂ. ನೀಡುವುದಾಗಿ ತನ್ನಲ್ಲಿ ತಿಳಿಸಿದ್ದನೆಂದು ಬಂಧಿತನು ಅಬಕಾರಿ ಅಧಿಕಾರಿಗಳಲ್ಲಿ ತಿಳಿಸಿದ್ದಾನೆ.