ಬಂಟ್ವಾಳ ಡಿ 26: ಜಲೀಲ್ ಕರೋಪಾಡಿಯ ಕೊಲೆ ಆರೋಪಿ, ಕೇಶವ ಮೇಲೆ ದುಷ್ಕರ್ಮಿಗಳು ಡಿ 26 ರ ಮಂಗಳವಾರ ಸಂಜೆ ಕಲ್ಲಡ್ಕದಲ್ಲಿ ದಾಳಿ ನಡೆಸಿದ್ದಾರೆ. ಬೈಕ್ ನಲ್ಲಿ ಹೆಲ್ಮೆಟ್ ಧರಿಸಿ ಬಂದ ಇಬ್ಬರು ಅಪರಿಚಿತರು ಏಕಾಏಕಿ ಕೇಶವ ಅವರ ಮೇಲೆ ಚೂರಿ ಇರಿದ್ದಿದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ. ಆದರೆ ಘಟನೆಯಿಂದ ಕಲ್ಲಡ್ಕ ಪೇಟೆಯಲ್ಲಿ ಭಯದ ವಾತವರಣ ನಿರ್ಮಾಣವಾಗಿದ್ದು ಹಲವು ಅಂಗಡಿಗಳು ತಕ್ಷಣ ಬಾಗಿಲು ಹಾಕಿ ಬಂದ್ ವಾತಾವರಣ ನಿರ್ಮಾಣವಾಯಿತು. ಸುದ್ದಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು. ವೀರಕಂಬದ ನಿವಾಸಿಯಾಗಿರುವ ಕೇಶವ್ ಮೇಲೆ ದಾಳಿಯಿಂದ ಹಣೆಯ ಮೇಲೆ ಆರು ಇಂಚಿನ ಆಳದ ಗಾಯಗಳಗಿದ್ದು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೇಶವ ತನ್ನ ಆ್ಯಕ್ಟಿವಾ ಹೋಂಡ ಸ್ಕೂಟರ್ನಲ್ಲಿ ಮನೆಯಿಂದ ಬಂದು ಕಲ್ಲಡ್ಕ ಪೇಟೆಯಲ್ಲಿ ನಿಲ್ಲಿಸಿ ಅದರಲ್ಲಿಯೇ ಕುಳಿತಿದ್ದು ಹಿಂಬದಿ ಸವಾರ ಹತ್ತಿರದ ಕೋಳಿ ಮಾಂಸದ ಅಂಗಡಿಗೆ ಹೋಗಿದ್ದ ಸಂದರ್ಭ ಹಲ್ಲೆ ಘಟನೆ ನಡೆದಿದೆ.ಈ ಸಂದರ್ಭ ಮಂಗಳೂರು-ಉಪ್ಪಿನಂಗಡಿ ನಡುವಣ ಸರಕಾರಿ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು.
ಗಾಯಾಳು ಹತ್ಯೆ ಆರೋಪಿ
ಹಲ್ಲೆಗೆ ಒಳಗಾದ ವ್ಯಕ್ತಿಯು 2017 ಎ. 20 ರಂದು ಕರೋಪಾಡಿ ಗ್ರಾ.ಪಂ. ಉಪಾಧ್ಯಕ್ಷ ಅಬ್ದುಲ್ ಜಲೀಲ್ ಹತ್ಯೆ ಪ್ರಕರಣದ 11 ಆರೋಪಿಗಳಲ್ಲಿ ಒಬ್ಬನಾಗಿದ್ದು, ಸುಮಾರು ಒಂದು ತಿಂಗಳ ಹಿಂದೆ ಜಾಮೀನಿನಲ್ಲಿ ಬಿಡುಗಡೆ ಹೊಂದಿದ್ದ.
ಹೆಚ್ಚುವರಿ ಪೊಲೀಸ್
ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಬಲವನ್ನು ನಿಯೋ ಜಿಸಲಾಗಿದೆ. ವಿಟ್ಲ ವ್ಯಾಪ್ತಿಯಲ್ಲಿಯೂ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ. ಸ್ಥಳದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಬಂಟ್ವಾಳ ವೃತ್ತನಿರೀಕ್ಷಕ ಪ್ರಕಾಶ್, ನಗರ ಠಾಣಾಧಿ ಕಾರಿ ಚಂದ್ರಶೇಖರ್, ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ ಇದ್ದಾರೆ. ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಸುಳಿವು ಪತ್ತೆ
ತನಿಖೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಓರ್ವ ಆರೋಪಿಯ ಸುಳಿವು ಪತ್ತೆಯಾಗಿದ್ದು ಹಿನ್ನೆಲೆಯಲ್ಲಿರುವ ಎಲ್ಲರನ್ನೂ ಶೀಘ್ರವೇ ಬಂಧಿಸುತ್ತೇವೆ ಎಂದು ಎಸ್ಪಿ ತಿಳಿಸಿದ್ದಾರೆ.