ಬಂಟ್ವಾಳ, ಜು. 25 (DaijiworldNews/TA): ಬರಿಮಾರು ಗ್ರಾಮದ ಕಲ್ಲೆಟ್ಟಿ ಬಳಿ ಶಾಲಾ ಬಸ್ ಮೇಲೆ ಮರ ಬಿದ್ದು ಬಾಲಕಿ ಮೃತಪಟ್ಟ ದುರಂತದ ಹಿನ್ನೆಲೆಯಲ್ಲಿ ಬಂಟ್ವಾಳ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಪಾಯಕಾರಿಯಾಗಿ ವಾಲಿದ್ದ ಮರಗಳ ತೆರವು ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.


ದುರಂತದ ಬಳಿಕ ಬಿ.ಸಿ.ರೋಡ್ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆ ಬದಿಯ ಬೃಹತ್ ಮರಗಳು ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ವಾಹನ ಸವಾರರಿಗೆ ಅಪಾಯಕಾರಿಯಾಗಿವೆ ಎಂಬ ಆತಂಕ ವ್ಯಕ್ತವಾಗಿತ್ತು. ಈ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾದ ಬೆನ್ನಲ್ಲೇ ಇಲಾಖೆಯ ಮೇಲಧಿಕಾರಿಗಳ ಸೂಚನೆಯಂತೆ ಶನಿವಾರ ಬೆಳಗ್ಗಿನಿಂದಲೇ ಕಾರ್ಯಾಚರಣೆ ಆರಂಭಿಸಲಾಯಿತು. ಬಿ.ಸಿ.ರೋಡ್ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಆವರಣದಲ್ಲಿ ಅಪಾಯಕಾರಿಯಾಗಿ ಚಾಚಿಕೊಂಡಿದ್ದ ಮರದ ಕೊಂಬೆಗಳನ್ನು ಕತ್ತರಿಸಲಾಯಿತು. ಅಲ್ಲದೇ ರಾಷ್ಟ್ರೀಯ ಹೆದ್ದಾರಿಯ ಮತ್ತೊಂದು ಬದಿಯಲ್ಲಿ ರಸ್ತೆಯ ಮೇಲೆಯೇ ವಾಲಿದ್ದ ಬೃಹತ್ ಮರದ ಕೊಂಬೆಗಳನ್ನೂ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದ ಸಮಸ್ಯೆಯನ್ನು ನಿವಾರಿಸಲಾಯಿತು.
ಬೆಳಗ್ಗೆ ಸುಮಾರು 6 ಗಂಟೆಯಿಂದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದರು. ಸುರಕ್ಷತಾ ದೃಷ್ಟಿಯಿಂದ ಸಂಚಯಗಿರಿ ಸೇರಿದಂತೆ ಕೆಲ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಸ್ಥಳೀಯರು ಈ ಕ್ರಮವನ್ನು ಸ್ವಾಗತಿಸಿದ್ದು, ಉಳಿದ ಅಪಾಯಕಾರಿ ಮರಗಳನ್ನೂ ಶೀಘ್ರ ಗುರುತಿಸಿ ತೆರವುಗೊಳಿಸುವಂತೆ ಇಲಾಖೆಗೆ ಮನವಿ ಮಾಡಿದ್ದಾರೆ.