ಬಂಟ್ವಾಳ, ಜು. 28 (DaijiworldNews/TA): ಇತ್ತೀಚೆಗೆ ವಿದ್ಯುತ್ ಆಘಾತದಿಂದ ಮೃತಪಟ್ಟ ಬಿ.ಮೂಡ ಗ್ರಾಮದ ಕೃಷಿಕ, ದಿವಂಗತ ಕೃಷ್ಣಪ್ಪ ಕುಲಾಲ್ (83) ಅವರ ಉತ್ತರಕ್ರಿಯೆ ಕಾರ್ಯಕ್ರಮದಲ್ಲಿ 400ಕ್ಕೂ ಅಧಿಕ ಗಿಡಗಳನ್ನು ವಿತರಿಸುವ ಮೂಲಕ ಕುಟುಂಬಸ್ಥರು ಮಾದರಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಜುಲೈ 15ರಂದು ಎ.ಎಂ.ಆರ್. ಸಂಸ್ಥೆಯ ವಿದ್ಯುತ್ ತಂತಿ ತಾಗಿ ದುರಂತಕ್ಕೀಡಾಗಿದ್ದ ಕೃಷ್ಣಪ್ಪ ಕುಲಾಲ್ ಅವರು, ಜೀವಮಾನವಿಡೀ ಕೃಷಿ, ಗೋಸೇವೆ ಹಾಗೂ ಪರಿಸರ ಪ್ರೇಮವನ್ನು ಮೈಗೂಡಿಸಿಕೊಂಡಿದ್ದರು. ಅವರ ಪ್ರಕೃತಿ ಪ್ರೀತಿಯ ನೆನಪನ್ನು ಜೀವಂತವಾಗಿರಿಸಲು ಉತ್ತರಕ್ರಿಯೆಗೆ ಆಗಮಿಸಿದ್ದ ಬಂಧುಗಳು ಹಾಗೂ ಗ್ರಾಮಸ್ಥರಿಗೆ ಕುಟುಂಬಸ್ಥರು ವಿವಿಧ ತಳಿಯ ಗಿಡಗಳನ್ನು ವಿತರಿಸಿ, ನೆಟ್ಟು ಬೆಳೆಸುವಂತೆ ವಿನಂತಿಸಿಕೊಂಡರು. ಉತ್ತರಕ್ರಿಯೆಯನ್ನು ಕೇವಲ ಸಂಪ್ರದಾಯಕ್ಕೆ ಸೀಮಿತಗೊಳಿಸದೆ ಪರಿಸರ ಜಾಗೃತಿ ಮೂಡಿಸಿದ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.