ಮಂಗಳೂರು, ಜು. 28 (DaijiworldNews/AA): ಯುವಜನರಲ್ಲಿ ಮಾದಕ ವಸ್ತುಗಳ ದುರ್ಬಳಕೆಯನ್ನು ತಡೆಯುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸರು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಕೋಟೆಕಾರ್ ಬೀರಿ ಹಾಗೂ ಕೊಣಾಜೆಯ ಬಂಟ್ಸ್ ಭವನದ ಸಮೀಪ ದಿಢೀರ್ ಡ್ರಗ್ ಪರೀಕ್ಷೆ ನಡೆಸಿದರು.


ಈ ಕಾರ್ಯಾಚರಣೆಯನ್ನು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅವರ ಮೇಲ್ವಿಚಾರಣೆಯಲ್ಲಿ ದಕ್ಷಿಣ ಹಾಗೂ ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರು (ಎಸಿಪಿ) ಸಮನ್ವಯಗೊಳಿಸಿದರು. ಸಂಜೆ 4.30ರಿಂದ 6.00 ಗಂಟೆಯವರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ, ಖಾಸಗಿ ಹಾಗೂ ಕಾಲೇಜು ಬಸ್ಗಳನ್ನು ತಡೆದು ವಿದ್ಯಾರ್ಥಿಗಳನ್ನು ಮಲ್ಟಿ ಡ್ರಗ್ ಟೆಸ್ಟಿಂಗ್ ಕಿಟ್ಗಳ ಮೂಲಕ ಪರೀಕ್ಷಿಸಲಾಯಿತು.
ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟೆಕಾರ್ ಬೀರಿಯಲ್ಲಿ ಎಸ್ಡಿಎಂ ಕಾಲೇಜು, ನಿಟ್ಟೆ ಕೆ.ಎಸ್. ಹೆಗ್ಡೆ, ಸೇಂಟ್ ಅಲೋಶಿಯಸ್ ಕಾಲೇಜು, ಪಿ.ಎ. ಕಾಲೇಜು, ಬ್ಯಾರೀಸ್ ಇನ್ಸ್ಟಿಟ್ಯೂಟ್, ಟಿಪ್ಪು ಸುಲ್ತಾನ್ ಕಾಲೇಜು ಹಾಗೂ ಕೆನರಾ ಕಾಲೇಜಿನ 72 ವಿದ್ಯಾರ್ಥಿಗಳಿಗೆ ಡ್ರಗ್ ಪರೀಕ್ಷೆ ನಡೆಸಲಾಯಿತು. ಈ ಪೈಕಿ 71 ವಿದ್ಯಾರ್ಥಿಗಳ ವರದಿ ನೆಗೆಟಿವ್ ಬಂದಿದ್ದು, ಒಬ್ಬ ವಿದ್ಯಾರ್ಥಿ ಡ್ರಗ್ ಸೇವಿಸಿರುವುದು ಪತ್ತೆಯಾಗಿದೆ.
ಇದೇ ವೇಳೆ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಬಂಟ್ಸ್ ಭವನದ ಸಮೀಪ ಪಿ.ಎ. ಕಾಲೇಜಿನ ಎರಡು ಬಸ್ಗಳನ್ನು ತಡೆದು 87 ವಿದ್ಯಾರ್ಥಿಗಳಿಗೆ ಡ್ರಗ್ ಪರೀಕ್ಷೆ ನಡೆಸಲಾಯಿತು. ಈ ಪರೀಕ್ಷೆಯಲ್ಲಿ ಎಲ್ಲಾ 87 ವಿದ್ಯಾರ್ಥಿಗಳ ವರದಿಯೂ ನೆಗೆಟಿವ್ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟು 159 ವಿದ್ಯಾರ್ಥಿಗಳ ಪೈಕಿ ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ಪಾಸಿಟಿವ್ ಬಂದಿರುವುದು ಸಮಾಧಾನಕರ ಸಂಗತಿಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಡ್ರಗ್ ಸೇವಿಸುವವರ ಪ್ರಮಾಣ ಕಡಿಮೆಯಾಗುತ್ತಿರುವ ಲಕ್ಷಣ ಕಂಡುಬಂದಿದ್ದರೂ, ಈ ಸಮಸ್ಯೆಯನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಇನ್ನೂ ಹೆಚ್ಚಿನ ಕ್ರಮಗಳು ಅಗತ್ಯವಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಡ್ರಗ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ವಿದ್ಯಾರ್ಥಿಯನ್ನು ಅಗತ್ಯ ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕೌನ್ಸೆಲಿಂಗ್ಗೆ ಕಳುಹಿಸಲಾಗುವುದು. ಪ್ರಕರಣದ ಕುರಿತು ಮುಂದಿನ ಹಂತದ ಮೇಲ್ವಿಚಾರಣೆ ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.