ಮಂಗಳೂರು, ಆ. 15 (DaijiworldNews/TA): ಮಂಗಳೂರಿನ ಬಿರುವೆರ್ ಕುಡ್ಲ ಸಂಘಟನೆಯ ವತಿಯಿಂದ ಎಂಬತ್ತನೆಯ ಸ್ವಾತಂತ್ರ್ಯೋತ್ಸವವನ್ನು ನಗರದ ಬ್ರಹ್ಮಶ್ರೀ ನಾರಾಯಣಗುರು ವೃತ್ತದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯದ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಧ್ವಜಾರೋಹಣ ನೆರವೇರಿಸಿದರು.


ಬಳಿಕ ಸಂದೇಶ ನೀಡಿದ ಅವರು, "ದೇಶಕ್ಕೆ ಶಾಂತಿಯುತ ಅಹಿಂಸಾ ಹೋರಾಟ, ಕ್ರಾಂತಿಯುತ ಹೋರಾಟ ಮತ್ತು ಲಕ್ಷಾಂತರ ಭಾರತೀಯರ ಪ್ರಾಣಾರ್ಪಣೆಯ ಫಲವಾಗಿ ನಾವು ಇಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಇಂದು ಭಾರತ ದೇಶವು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಅಮೃತ ಕಾಲದತ್ತ ಹೆಜ್ಜೆಯಾಗುತ್ತಿದೆ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಜೆಗಳಾದ ನಾವೆಲ್ಲರೂ ನಮ್ಮಿಂದಾದ ಕೊಡುಗೆಗಳನ್ನು ನೀಡುತ್ತಾ ಬಲಿಷ್ಠ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು" ಎಂದು ಹೇಳಿದರು.
ಬಿರುವೆರ್ ಕುಡ್ಲ ಸಂಘಟನೆಯು ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ಬಾಗ್ ಅವರ ನೇತೃತ್ವದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲರಿಗೆ ನೆರವು, ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರೋತ್ಸಾಹ ಸೇರಿದಂತೆ ವಿವಿಧ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾ ಬರುತ್ತಿದೆ. ಇಂತಹ ಸಂಘಟನೆಗಳು ಇತರರಿಗೆ ಮಾದರಿಯಾಗಿದೆ ಎಂದು ಅವರು ಶ್ಲಾಘಿಸಿದರು.
ಕಾರ್ಕಳದ ನಿವೃತ್ತ ಯೋಧ ಪ್ರವೀಣ್ ಶೆಟ್ಟಿ ಮಾತನಾಡಿ, "ತ್ಯಾಗ ಬಲಿದಾನಗಳ ಪ್ರತೀಕವಾಗಿ ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಬಲಿದಾನ ಗೈದವರನ್ನು ಸ್ಮರಿಸುವುದು ಮತ್ತು ಅವರಿಗೆ ಗೌರವ ಅರ್ಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ" ಎಂದು ನುಡಿದರು. ಬಿರುವೆರ್ ಕುಡ್ಲ ಸಂಘಟನೆಯ ಕಾರ್ಯಗಳಿಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಉದಯ ಪೂಜಾರಿ ಬಳ್ಳಾಲ್ಬಾಗ್, ರಾಕೇಶ್ ಪೂಜಾರಿ ಬಳ್ಳಾಲ್ ಬಾಗ್,ಪ್ರವೀಣ್ ಸುವರ್ಣ ಬಗಂಬಿಲ, ಜೀತೇಶ್ ಜೈನ್, ದರ್ಶನ್ ಜೈನ್, ಲತೀಶ್ ಬಳ್ಳಾಲ್ಬಾಗ್, ಸಹನಾ ಕುಂದರ್, ವಿದ್ಯಾ ರಾಕೇಶ್, ಲೋಹಿತ್ ಗಟ್ಟಿ, ಧನರಾಜ್ ಚಿಲಿಂಬಿ, ಮನೋಜ್ ಶೆಟ್ಟಿ, ವಸಂತ್ ಪೂಜಾರಿ, ಪ್ರಮೋದ್ ಬಳ್ಳಾಲ್ಬಾಗ್, ಕಿಶೋರ್ ಬಾಬು, ರೆನಿತ್ ರಾಜ್, ರಾಕೇಶ್ ಚಿಲಿಂಬಿ, ಕಿಶೋರ್ ಬಾಬು,ಗಿರೀಶ್ ಬತ್ತೇರಿ ಅಶ್ವಿನ್ ಚಿಲಿಂಬಿ ಗಣೇಶ್ ಚಿಲಿಂಬಿ ಮಹೇಶ್ ಚಿಲಿಂಬಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.