ಮಂಗಳೂರು, ಆ. 15 (DaijiworldNews/AA): ನಗರದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ (MCC) ಆಯುಕ್ತ ರಾಹುಲ್ ರತ್ನಂ ಪಾಂಡೆ ಅವರು ಶುಕ್ರವಾರ ನಗರದ ವಿವಿಧೆಡೆ ಪರಿಶೀಲನೆ ನಡೆಸಿದರು. ಕಸ ಎಸೆಯಲಾಗುತ್ತಿರುವ ಬ್ಲ್ಯಾಕ್ ಸ್ಪಾಟ್ಗಳು, ತ್ಯಾಜ್ಯ ನಿರ್ವಹಣಾ ವ್ಯವಸ್ಥೆ, ನಿರ್ಮಾಣ ತ್ಯಾಜ್ಯ ಹಾಗೂ ಅದರ ವಿಲೇವಾರಿ ವ್ಯವಸ್ಥೆಗಳನ್ನು ಅವರು ಪರಿಶೀಲಿಸಿದರು.

ಶಿವರಾಮ ಕಾರಂತ ರಸ್ತೆ, ಕೆ.ಎಸ್. ರಾವ್ ರಸ್ತೆ, ಲೇಡಿ ಗೋಶನ್, ಸೆಂಟ್ರಲ್ ಮಾರ್ಕೆಟ್ ಸೇರಿದಂತೆ ನಗರದ ಪ್ರಮುಖ ಪ್ರದೇಶಗಳಿಗೆ ಭೇಟಿ ನೀಡಿದ ಆಯುಕ್ತರು, ಅಲ್ಲಿನ ಸ್ವಚ್ಛತಾ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದರು. ಆರೋಗ್ಯ ಇಲಾಖೆಯ ಅಧಿಕಾರಿಗಳು ನಗರದಲ್ಲಿನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಕುರಿತು ಆಯುಕ್ತರಿಗೆ ವಿವರಿಸಿದರು.
ಇದೇ ವೇಳೆ, ಪೌರಕಾರ್ಮಿಕರಿಂದ ರಸ್ತೆ ಸ್ವಚ್ಛತಾ ಕಾರ್ಯಗಳ ವಿಧಾನ ಹಾಗೂ ಸ್ವಚ್ಛತೆಗೆ ಸಂಬಂಧಿಸಿದ ವಿವಿಧ ಅಂಶಗಳ ಕುರಿತು ಆಯುಕ್ತರು ಮಾಹಿತಿ ಪಡೆದು ಚರ್ಚಿಸಿದರು. ನಗರದ ಸ್ವಚ್ಛತೆ ಮತ್ತಷ್ಟು ಸುಧಾರಿಸಲು ಅಧಿಕಾರಿಗಳಿಗೆ ಹಲವು ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದ ಅವರು, ಹೋಟೆಲ್ಗಳು, ಅಂಗಡಿಗಳು ಹಾಗೂ ಇತರ ವಾಣಿಜ್ಯ ಸಂಸ್ಥೆಗಳಿರುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಕಸದ ಬುಟ್ಟಿಗಳನ್ನು ಅಳವಡಿಸುವಂತೆ ಸೂಚಿಸಿದರು.
ಇದರೊಂದಿಗೆ ನಿರ್ಮಾಣ ತ್ಯಾಜ್ಯವನ್ನು ತಕ್ಷಣ ತೆರವುಗೊಳಿಸುವುದು, ಫುಟ್ಪಾತ್ಗಳಲ್ಲಿರುವ ತಾತ್ಕಾಲಿಕ ರಚನೆಗಳನ್ನು ತೆರವುಗೊಳಿಸುವುದು ಹಾಗೂ ಕಸ ಎಸೆಯುವ ಬ್ಲ್ಯಾಕ್ ಸ್ಪಾಟ್ಗಳನ್ನು ನಿಯಂತ್ರಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ರಸ್ತೆಗಳಲ್ಲಿ ತ್ಯಾಜ್ಯ ಎಸೆಯುವ ಸ್ಟ್ರೀಟ್ ಫುಡ್ ವ್ಯಾಪಾರಿಗಳಿಗೆ ನೋಟಿಸ್ ಜಾರಿ ಮಾಡಬೇಕು. ನಗರದ ಸ್ವಚ್ಛತೆ ಕಾಪಾಡುವಲ್ಲಿ ನಿರ್ಲಕ್ಷ್ಯ ತೋರದಂತೆ ಹಾಗೂ ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಯುಕ್ತರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.