ಹೆಬ್ರಿ, ಆ. 15 (DaijiworldNews/AA): ಮನೆ ತೆರಿಗೆಯಾಗಿ ಸಂಗ್ರಹಿಸಿದ ಹಣವನ್ನು ದುರ್ಬಳಕೆ ಮಾಡಿಕೊಂಡು ವೈಯಕ್ತಿಕ ಉದ್ದೇಶಗಳಿಗೆ ಬಳಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೆಬ್ರಿ ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಮಂಜುನಾಥ್ ಅವರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಯಲ್ ಅವರು ಮಂಜುನಾಥ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಶಿವಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್ ಅವರು ಗುರುವಾರ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ವಂಚನೆ ಪ್ರಕರಣ ದಾಖಲಿಸಲಾಗಿದೆ.
ದೂರಿನ ಪ್ರಕಾರ, ಮಂಜುನಾಥ್ ಅವರು ಸುಮಾರು 7.50 ಲಕ್ಷ ರೂ. ಹಣವನ್ನು ವೈಯಕ್ತಿಕ ಬಳಕೆಗೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ವಿಷಯ ಬೆಳಕಿಗೆ ಬಂದ ಬಳಿಕ ಶಿವಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್ ಅವರು ವಿಚಾರಣೆ ನಡೆಸಿ ಮಂಜುನಾಥ್ ಅವರಿಗೆ ನೋಟಿಸ್ ಜಾರಿ ಮಾಡಿದ್ದರು. ಬಳಿಕ ಅವರು ಪಂಚಾಯಿತಿಗೆ ಸುಮಾರು 3 ಲಕ್ಷ ರೂ. ಮರುಪಾವತಿ ಮಾಡಿದ್ದರು. ಆದರೆ ಉಳಿದ ಮೊತ್ತವನ್ನು ಪಾವತಿಸದೆ ಪಂಚಾಯಿತಿಗೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
2023-24ನೇ ಸಾಲಿನಲ್ಲಿ ಮನೆ ತೆರಿಗೆಯಾಗಿ ಸಂಗ್ರಹಿಸಿದ 1.18 ಲಕ್ಷ ರೂ. ಹಾಗೂ 2024-25ನೇ ಸಾಲಿನಲ್ಲಿ ಸಂಗ್ರಹಿಸಿದ 3.36 ಲಕ್ಷ ರೂ. ಗಳನ್ನು ಪಂಚಾಯಿತಿಯ ಬ್ಯಾಂಕ್ ಖಾತೆಗೆ ಜಮೆ ಮಾಡದೆ ಮಂಜುನಾಥ್ ಅವರು ತಮ್ಮ ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಒಟ್ಟು 4.54 ಲಕ್ಷ ರೂ. ಹಣವನ್ನು ದುರ್ಬಳಕೆ ಮಾಡಿಕೊಂಡು ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.