ಮಂಗಳೂರು, ಸೆ. 09 (DaijiworldNews/TA): ಬಂದಿಖಾನೆಯಲ್ಲಿರುವ ಖೈದಿಗಳಿಗೆ ಮೊಬೈಲ್ ಸಂಪರ್ಕ ಸುಲಭವಾಗಿ ಸಿಗುತ್ತಿದೆ, ಆದರೆ ಜೈಲಿನ ಸುತ್ತಮುತ್ತ ವಾಸಿಸುವ ಸಾರ್ವಜನಿಕರು ಜ್ಯಾಮರ್ ಸಮಸ್ಯೆಯಿಂದಾಗಿ ನೆಟ್ವರ್ಕ್ ಇಲ್ಲದೆ ಪರದಾಡುವಂತಾಗಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಮಂಗಳೂರು ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರು ನಡೆಸಿದ ದಿಢೀರ್ ದಾಳಿಯ ವೇಳೆ 9 ಖೈದಿಗಳಿಂದ 10 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಹಾಗೂ ಗೃಹ ಇಲಾಖೆಯ ಸಂಪೂರ್ಣ ಆಡಳಿತ ವೈಫಲ್ಯಕ್ಕೆ ನಿದರ್ಶನ ಎಂದು ಅವರು ಲೇವಡಿ ಮಾಡಿದ್ದಾರೆ.
ಆರೆಸ್ಸೆಸ್ ಹಾಗೂ ಮೋದಿ ಅವರ ಬಗ್ಗೆ ಮಾತನಾಡಲು ಸಮಯ ಕಂಡುಕೊಳ್ಳುವ ಸರ್ಕಾರಕ್ಕೆ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳು ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿರುವ ಅವರು, ತಕ್ಷಣವೇ ಬಂದಿಖಾನೆಯ ಭದ್ರತಾ ವ್ಯವಸ್ಥೆಯನ್ನು ಸರಿಪಡಿಸಿ ಸುತ್ತಮುತ್ತಲಿನ ನಿವಾಸಿಗಳಿಗೆ ಎದುರಾಗಿರುವ ನೆಟ್ವರ್ಕ್ ಕಿರಿಕಿರಿಯನ್ನು ತಪ್ಪಿಸಬೇಕೆಂದು ಆಗ್ರಹಿಸಿದ್ದಾರೆ.