ಉಪ್ಪಿನಂಗಡಿ, ಸೆ. 09 (DaijiworldNews/TA): ವ್ಯಾಪಕ ಅವ್ಯವಹಾರ, ಭ್ರಷ್ಟಾಚಾರಗಳ ದೂರಿನ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಗ್ರಾ.ಪಂ.ಗೆ ಬುಧವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಗಾನ ಕುಮಾರಿ ನೇತೃತ್ವದ ತಂಡವು ದಾಳಿ ನಡೆಸಿ ಕಚೇರಿಯಲ್ಲಿ ಕಡತಗಳ ಪರಿಶೀಲನೆ ನಡೆಸಿತು.

ಗ್ರಾ.ಪಂ.ಗೆ ಲೋಕಾಯುಕ್ತ ದಾಳಿ ನಡೆಸಿರುವ ಸುದ್ದಿ ತಿಳಿದ ಕೂಡಲೇ ಗ್ರಾ.ಪಂ. ವ್ಯಾಪ್ತಿಯ ವರ್ತಕರು, ಉದ್ಯಮಿಗಳು ಹಾಗೂ ಸಾರ್ವಜನಿಕರು ಆಗಮಿಸಿ ಗ್ರಾ.ಪಂ.ನಲ್ಲಿ ನಡೆಯುತ್ತಿರುವ ಅವ್ಯವಹಾರಗಳು, ಪರವಾನಿಗೆ ನವೀಕರಣಕ್ಕೆ ಲಂಚಕ್ಕೆ ಬೇಡಿಕೆ ಇಡುತ್ತಿರುವ ಬಗ್ಗೆ ಲೋಕಾಯುಕ್ತ ತಂಡಕ್ಕೆ ದೂರು ನೀಡಿದರು. ದೂರುಗಳನ್ನು ಆಲಿಸಿದ ಲೋಕಾಯುಕ್ತ ಡಿವೈಎಸ್ಪಿಯವರು ಗ್ರಾ.ಪಂ. ಸಿಬ್ಬಂದಿಯವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಯಾವುದೇ ಅರ್ಜಿಗಳನ್ನು ತೆಗೆದು ಅದಕ್ಕೆ ಬೇಕಾದ ಹಿಂಬರಹ ಕೊಡೋದು ನಿಮ್ಮ ಕರ್ತವ್ಯ. ಪಿಡಿಒ ಅರ್ಜಿ ತಗೆದುಕೊಳ್ಳಬೇಡಿ ಎಂದು ಹೇಳಿದರೂ ನೀವು ನಿಮ್ಮ ಕರ್ತವ್ಯ ಮಾಡಬೇಕು ಎಂದರು.
ಆ ಸಂದರ್ಭ ಅಲ್ಲಿ ಬಂದ ದೂರುದಾರರಲ್ಲಿದ್ದ ಅರ್ಜಿಗಳನ್ನು ತಕ್ಷಣವೇ ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿ ಹಿಂಬರಹ ನೀಡಬೇಕೆಂದು ಸೂಚಿಸಿದರು. ಲೋಕಾಯುಕ್ತ ತಂಡ ಗ್ರಾ.ಪಂ.ಗೆ ದಾಳಿ ನಡೆಸಿದಾಗ ಇಲ್ಲಿನ ಪ್ರಭಾರ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಅವರು ಕಚೇರಿಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.