ಉಡುಪಿ, ಸೆ. 11 (DaijiworldNews/TA): ನಗರದ ಸಿಂಡಿಕೇಟ್ ವೃತ್ತದ ಬಳಿಯ ಇಳಿಜಾರಿನಲ್ಲಿ ಟ್ಯಾಂಕರ್ ವಾಹನವೊಂದು ಕೆಟ್ಟು ನಿಂತು ಮೂರು ದಿನಗಳು ಕಳೆದರೂ ತೆರವುಗೊಳಿಸದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಉಡುಪಿಯಿಂದ ಮಣಿಪಾಲ ಕಡೆಗೆ ತೆರಳುತ್ತಿದ್ದ ವೇಳೆ ಬೆಟ್ಟದ ಇಳಿಜಾರಿನಲ್ಲಿ ವಾಹನ ಕೆಟ್ಟು ನಿಂತಿದೆ ಎನ್ನಲಾಗಿದ್ದು, ರಸ್ತೆ ಬದಿಯಲ್ಲೇ ಸಿಲುಕಿಕೊಂಡಿರುವ ವಾಹನದಿಂದ ಇತರ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ.

ವಾಹನ ನಿಂತಿರುವ ಸ್ಥಳದಿಂದ ಸ್ವಲ್ಪ ದೂರದಲ್ಲೇ ಟ್ರಾಫಿಕ್ ಸಿಗ್ನಲ್ ಇರುವುದರಿಂದ, ಸಂಚಾರ ದಟ್ಟಣೆಯ ಸಮಯದಲ್ಲಿ ಬಸ್ಗಳು ಹಾಗೂ ಇತರ ಭಾರೀ ವಾಹನಗಳು ಸಂಚರಿಸಲು ಮತ್ತು ನಿಲ್ಲಿಸಲು ಸಮಸ್ಯೆಯಾಗುತ್ತಿದೆ. ಪರಿಣಾಮವಾಗಿ ಸ್ಥಳದಲ್ಲಿ ಸಂಚಾರಕ್ಕೆ ಅಡ್ಡಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ, ದೂರದಿಂದ ಬರುವ ವಾಹನ ಸವಾರರಿಗೆ ಕೆಟ್ಟು ನಿಂತಿರುವ ಭಾರೀ ವಾಹನ ಸುಲಭವಾಗಿ ಗೋಚರಿಸುವುದಿಲ್ಲ. ಸ್ಥಳಕ್ಕೆ ಸಮೀಪ ಬಂದ ಬಳಿಕವಷ್ಟೇ ವಾಹನ ಸಿಲುಕಿಕೊಂಡಿರುವುದು ಗಮನಕ್ಕೆ ಬರುತ್ತಿದ್ದು, ಇದು ಅಪಘಾತದ ಅಪಾಯವನ್ನೂ ಹೆಚ್ಚಿಸಿದೆ.
ವಾಹನದ ಹಿಂಭಾಗದಲ್ಲಿ ಎಚ್ಚರಿಕೆಯ ಸೂಚನೆಯಾಗಿ ಎಲೆಗಳ ಸಣ್ಣ ಕಟ್ಟನ್ನು ಕಟ್ಟಲಾಗಿದೆಯಾದರೂ, ವಾಹನ ಸವಾರರಿಗೆ ಮುನ್ನೆಚ್ಚರಿಕೆ ನೀಡಲು ಅಗತ್ಯವಿರುವ ಎಚ್ಚರಿಕೆ ದೀಪ, ಪ್ರತಿಫಲಕ ಫಲಕ ಅಥವಾ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೂರು ದಿನಗಳಿಂದ ವಾಹನ ತೆರವುಗೊಳ್ಳದೆ ಇರುವುದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ವಾಹನವನ್ನು ತೆರವುಗೊಳಿಸಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.