ಪುತ್ತೂರು, ಸೆ. 11 (DaijiworldNews/AK): ಶುಕ್ರವಾರ ಮುಂಜಾನೆ ಪುತ್ತೂರಿನ ದರ್ಬೆ ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳು ಕಾಣಿಸಿಕೊಂಡಿದ್ದು, ವಾಹನ ಸವಾರರು, ಬೆಳಗಿನ ನಡಿಗೆ ಮಾಡುವ ಸ್ಥಳಿಯರಲ್ಲಿ ಆತಂಕ ಮೂಡಿಸಿದೆ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿರುವ ದುಗ್ಗಮ್ಮ-ದೇರಣ್ಣ ಶೆಟ್ಟಿ ಸಭಾ ಭವನದ ಬಳಿ ಕಾಣಿಸಿಕೊಂಡಿದೆ.

ಪಟ್ಟಣದ ಹೃದಯ ಭಾಗದಲ್ಲಿರುವ ಪ್ರಮುಖ ರಸ್ತೆಯಲ್ಲಿ ಪ್ರತ್ಯಕ್ಷವಾದ ಕಾರಣ ವಾಹನ ಚಾಲಕರು ಮತ್ತು ಹಾಲಿನ ಡೈರಿ ಕೆಲಸಗಾರರು, ಪತ್ರಿಕೆ ವಿತರಕರು ಮತ್ತು ಬೆಳಗಿನ ನಡಿಗೆಗೆ ಹೊರಟಿದ್ದ ಜನರನ್ನು ಸ್ವಲ್ಪ ಸಮಯದವರೆಗೆ ಭಯಭೀತರನ್ನಾಗಿ ಮಾಡಿತ್ತು.
ಪಟ್ಟಣ ಪ್ರದೇಶದಲ್ಲಿ ಎರಡು ಪ್ರಾಣಿಗಳು ಕಾಣಿಸಿಕೊಂಡಿರುವುದು ಸ್ಥಳೀಯ ನಿವಾಸಿಗಳು ಮತ್ತು ಸಾರ್ವಜನಿಕರಲ್ಲಿ ಹೊಸ ಕಳವಳವನ್ನು ಹುಟ್ಟುಹಾಕಿದೆ. ಆಹಾರ ಮತ್ತು ನೀರನ್ನು ಹುಡುಕುತ್ತಾ ಹತ್ತಿರದ ಅರಣ್ಯ ಪ್ರದೇಶಗಳಿಂದ ದಾರಿ ತಪ್ಪಿ ಪಟ್ಟಣದ ವಸತಿ ಮತ್ತು ವಾಣಿಜ್ಯ ಭಾಗಗಳಿಗೆ ಪ್ರವೇಶಿಸಿರಬಹುದು ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.
ಕಾಡುಕೋಣಗಳನ್ನು ಸುರಕ್ಷಿತವಾಗಿ ಕಾಡಿಗೆ ಓಡಿಸಲು ತಕ್ಷಣ ಕಾರ್ಯಾಚರಣೆ ಆರಂಭಿಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪುತ್ತೂರು ನಿವಾಸಿಗಳು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟಲು ಮತ್ತು ವಾಹನ ಚಾಲಕರು, ಪಾದಚಾರಿಗಳು ಮತ್ತು ಪ್ರದೇಶದ ನಿವಾಸಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.