ಮಂಗಳೂರು, ಸೆ. 11 (DaijiworldNews/AK): ನಗರವನ್ನು ಮಾದಕ ವಸ್ತು ಮುಕ್ತವಾಗಿಸುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಇಲಾಖೆ ಹಾಗೂ ಕಾಲೇಜು ಆಡಳಿತ ಮಂಡಳಿಗಳು ಜಂಟಿಯಾಗಿ ನಡೆಸುತ್ತಿರುವ 'ಡ್ರಗ್ಸ್ ಮುಕ್ತ ಕ್ಯಾಂಪಸ್' ಅಭಿಯಾನಕ್ಕೆ ಅತ್ಯಂತ ಆಶಾದಾಯಕ ಮತ್ತು ಧನಾತ್ಮಕ ಫಲಿತಾಂಶ ಸಿಕ್ಕಿದೆ.

ಆರಂಭಿಕ ಹಂತದಲ್ಲಿ ಮಾದಕ ವಸ್ತು ಸೇವಿಸಿ ಸಿಕ್ಕಿಬಿದ್ದಿದ್ದ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ನೀಡಿದ ಬಳಿಕ ನಡೆಸಲಾದ ಮರುಪರೀಕ್ಷೆಯಲ್ಲಿ, ಶೇಕಡಾ 75ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಸನಮುಕ್ತರಾಗಿರುವುದು ದೃಢಪಟ್ಟಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ನಗರದ 150 ಕಾಲೇಜುಗಳಲ್ಲಿ ಜನವರಿಯಿಂದ ಈವರೆಗೆ ಒಟ್ಟು 8,310 ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಈ ಪೈಕಿ 98 ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ಸೇವನೆ ಇರುವುದು ಪಾಸಿಟಿವ್ ಆಗಿ ಕಂಡುಬಂದಿತ್ತು. ಇವರ ವಿರುದ್ಧ ಕೇವಲ ಕಾನೂನು ಕ್ರಮಕ್ಕೆ ಸೀಮಿತವಾಗದೆ, ಅವರ ಭವಿಷ್ಯವನ್ನು ಸರಿಪಡಿಸುವ ಉದ್ದೇಶದಿಂದ ಪೋಷಕರು ಹಾಗೂ ಕಾಲೇಜು ಆಡಳಿತ ಮಂಡಳಿಯ ಸಹಯೋಗದೊಂದಿಗೆ ತಜ್ಞರಿಂದ ನಿರಂತರ ಕೌನ್ಸೆಲಿಂಗ್ ಕೊಡಿಸಲಾಗಿತ್ತು.
ಮರುಪರೀಕ್ಷೆಯಲ್ಲಿ 38 ವಿದ್ಯಾರ್ಥಿಗಳು ನೆಗೆಟಿವ್:
ಕೌನ್ಸೆಲಿಂಗ್ನ ಪ್ರಭಾವ ಮತ್ತು ಫಲಿತಾಂಶ ಪರಿಶೀಲಿಸುವ ಉದ್ದೇಶದಿಂದ, ಈ ಹಿಂದೆ ಪಾಸಿಟಿವ್ ಬಂದಿದ್ದ ವಿದ್ಯಾರ್ಥಿಗಳಲ್ಲಿ 50 ಮಂದಿಯನ್ನು ನಿನ್ನೆ ವಿಶೇಷ ಕಾರ್ಯಾಚರಣೆ ನಡೆಸಿ ಮರುಪರೀಕ್ಷೆಗೆ ಒಳಪಡಿಸಲಾಯಿತು. ಈ ವೇಳೆ 38 ವಿದ್ಯಾರ್ಥಿಗಳಲ್ಲಿ ವರದಿ ಸಂಪೂರ್ಣವಾಗಿ ನೆಗೆಟಿವ್ ಬಂದಿದ್ದು, ಡ್ರಗ್ಸ್ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಉಳಿದ 12 ವಿದ್ಯಾರ್ಥಿಗಳ ಮೇಲೆ ಪೋಷಕರು ಮತ್ತು ಕಾಲೇಜು ಆಡಳಿತ ಮಂಡಳಿಯು ಹೆಚ್ಚಿನ ನಿಗಾ ಇರಿಸಿ, ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಮುಂದುವರಿಸುವಂತೆ ಸೂಚಿಸಲಾಗಿದೆ.
ಈ ಮಹತ್ವದ ಬೆಳವಣಿಗೆ ಹಾಗೂ ಅಭಿಯಾನದ ಯಶಸ್ಸಿನ ಕುರಿತು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಅವರು ಮಾತನಾಡಿ, "ನಗರದ 150 ಕಾಲೇಜುಗಳ ಸುಮಾರು 8,500 ವಿದ್ಯಾರ್ಥಿಗಳಲ್ಲಿ ತಪಾಸಣೆ ನಡೆಸಿದಾಗ 98 ಮಂದಿ ಪಾಸಿಟಿವ್ ಬಂದಿದ್ದರು. ಅವರನ್ನು ಕೌನ್ಸೆಲಿಂಗ್ಗೆ ಕಳುಹಿಸಿದ ನಂತರ, ಮೊದಲ ಹಂತದಲ್ಲಿ 50 ವಿದ್ಯಾರ್ಥಿಗಳನ್ನು ಮರುಪರೀಕ್ಷೆ ಮಾಡಿದಾಗ ಬರೋಬ್ಬರಿ 38 ವಿದ್ಯಾರ್ಥಿಗಳು ವ್ಯಸನಮುಕ್ತರಾಗಿ ನೆಗೆಟಿವ್ ಬಂದಿರುವುದು ಅತ್ಯಂತ ಸಮಾಧಾನಕರ ಸಂಗತಿ.
ಕಾಲೇಜು ಆಡಳಿತ ಮಂಡಳಿ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸಹಕಾರದಿಂದಲೇ ಶೇ.75ರಷ್ಟು ವಿದ್ಯಾರ್ಥಿಗಳನ್ನು ಮತ್ತೆ ಸರಿಹಾದಿಗೆ ತರಲು ಸಾಧ್ಯವಾಗಿದೆ. ಮುಂದೆಯೂ ಇದೇ ರೀತಿಯ ಸಹಕಾರ ಮುಂದುವರಿಯಲಿ ಎಂದು ಹೇಳಿದರು.