ಮಂಗಳೂರು , ಸೆ. 12 (DaijiworldNews/AK): ವಿಶ್ವ ಬಂಟ ಪ್ರತಿಷ್ಠಾನ ಇದರ 30ನೇ ವಾರ್ಷಿಕ ಮಹಾಸಭೆ ಹಾಗೂ ಎಮಿನೆಂಟ್ ಬಂಟ್ ಪರ್ಸನಾಲಿಟಿ ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ನಗರದ ಎ.ಜೆ. ಗ್ರ್ಯಾಂಡ್ನ ಸಭಾಂಗಣದಲ್ಲಿ ನಡೆಯಿತು.

ಕೈಗಾರಿಕೋದ್ಯಮಿ, ಯುನೈಟೆಡ್ ರಬ್ಬರ್ ಇಂಡಸ್ಟ್ರೀಸ್ ನ ಸ್ಥಾಪಕಾಧ್ಯಕ್ಷ ಪಾದೆ ಅಜಿತ್ ರೈ ಅವರಿಗೆ ವಿಶ್ವ ಬಂಟ ಪ್ರತಿಷ್ಠಾನದ ಎಮಿನೆಂಟ್ ಬಂಟ್ ಪರ್ಸನಾಲಿಟಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಪಾದೆ ಅಜಿತ್ ರೈ ಮಾತನಾಡಿ " ಆರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರಿಗೆ ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯ ಸೇವೆ ನೀಡಲು ನೆರವಾಗುವುದು ಎಲ್ಲರ ಕರ್ತವ್ಯ. ಮಾನವೀಯ ಸೇವೆಯಿಂದ ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರಲು ಸಾಧ್ಯವಾಗುತ್ತದೆ. ಸಮಾಜದ ಸಂಕಷ್ಟಕ್ಕೆ ಸ್ಪಂದಿಸುವ ಗುಣವನ್ನು ಮಕ್ಕಳಲ್ಲಿ ಬೆಳೆಸಿ ಬಂಟ ಸಮಾಜದ ಸೇವಾ ಪರಂಪರೆಗೆ ಪ್ರೇರಣೆ ನೀಡಬೇಕು' ಎಂದರು.
ಯಕ್ಷಗಾನ ಕಲಾವಿದ ಸುರೇಶ್ ಶೆಟ್ಟಿ ಶಂಕರನಾರಾಯಣ ಅವರಿಗೆ ಡಾ.ಡಿ.ಕೆ. ಚೌಟ ದತ್ತಿನಿಧಿ ಪ್ರಶಸ್ತಿ, ಸಿಎ ಅಂತಿಮ ಪರೀಕ್ಷೆಯಲ್ಲಿ 47ನೇ ರ್ಯಾಂಕ್ ಪಡೆದ ಆದಿತ್ಯ ಪೆರ್ಗಡೆ ಅವರಿಗೆ ದಿ.ಸಿಎ.ವೈ.ಆರ್.ಶೆಟ್ಟಿ ದತ್ತಿನಿಧಿ ಪ್ರಶಸ್ತಿ, ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪುನೀತ್ ಶೆಟ್ಟಿ ಅವರಿಗೆ ಸಿಎ ಗೋಪಾಲ್ ಬಿ.ಶೆಟ್ಟಿ ದತ್ತಿನಿಧಿ ಪ್ರಶಸ್ತಿ ಹಾಗೂ ಕೃಷಿ ಕ್ಷೇತ್ರದ ಸಾಧಕಿ ಸಾಧಮ್ಮ ಶೆಟ್ಟಿ ಅವರಿಗೆ ದಿ.ಎಣ್ಮಕಜೆ ಕಲಾವತಿ ಶೆಟ್ಟಿ ದತ್ತಿನಿಧಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಪ್ರತಿಷ್ಠಾನದ ಪೋಷಕ ಡಾ.ಎಂ.ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ.ಬಿ.ಸಚ್ಚಿದಾನಂದ ರೈ ಪ್ರತಿಷ್ಠಾನದ ವಾರ್ಷಿಕ ವರದಿ ವಾಚಿಸಿದರು. ಯೋಜನಾ ನಿರ್ದೇಶಕ ಡಾ.ಬಿ.ಸಂಜೀವ ರೈ, ಉಪಾಧ್ಯಕ್ಷರಾದ ಟಿ.ಸುಬ್ಬಯ್ಯ ಶೆಟ್ಟಿ , ಜ್ಯೋತಿ.ಎ.ಆಳ್ವ, ಪಾದೆ ಅಜಿತ್ ರೈ ಅವರ ಪುತ್ರ ಗೀತ್ ರೈ, ಸೊಸೆ ನಿಹಾರಿಕಾ ರೈ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಉಪಾಧ್ಯಕ್ಷ ಸಿಎ ಸುಧೀರ್ ಕುಮಾರ್ ಶೆಟ್ಟಿ ಮತ್ತು ಪಳ್ಳಿ ಕಿಶನ್ ಹೆಗ್ಡೆ ಸನ್ಮಾನ ಪತ್ರ ವಾಚಿಸಿದರು. ಕೋಶಾಧಿಕಾರಿ ಸಿಎ ಪ್ರವೀಣ್ ಕುಮಾರ್ ಶೆಟ್ಟಿ ವಂದಿಸಿದರು. ಡಾ.ಪ್ರಿಯಾ ಹರೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.