ಮಂಗಳೂರು, ಸೆ.12 (DaijiworldNews/AA): ಉಡುಪಿಯ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳ ಮೇಲೆ ಮಂಗಳೂರು ಜೈಲಿನಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ 5 ಲಕ್ಷ ರೂ. ಸುಲಿಗೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಮಂದಿ ಆರೋಪಿಗಳು ದೋಷಿಗಳು ಎಂದು ಮಂಗಳೂರಿನ ತ್ವರಿತಗತಿ ನ್ಯಾಯಾಲಯ ತೀರ್ಪು ನೀಡಿದೆ.

ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯವು ಸೆಪ್ಟೆಂಬರ್ 16ರಂದು ಪ್ರಕಟಿಸಲಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
2017ರ ಸೆಪ್ಟೆಂಬರ್ 11ರಂದು ಮಧ್ಯಾಹ್ನ 12:30ಕ್ಕೆ ಮಂಗಳೂರು ಜಿಲ್ಲಾ ಕಾರಾಗೃಹದ ಹೊಸ ಕಟ್ಟಡದ 'ಬಿ' ಬ್ಲಾಕ್ ವರಾಂಡದಲ್ಲಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ವಿಚಾರಣಾ ಕೈದಿಗಳಾದ ನವನೀತ ಶೆಟ್ಟಿ ಹಾಗೂ ನಿರಂಜನ್ ಭಟ್ ಮೇಲೆ ತಮ್ಮ ಕೇಸಿನ ಮುಂದಿನ ವಿಚಾರಣೆಯ ದಿನಾಂಕ ತಿಳಿಯಲು ಜೈಲರ್ ಕಚೇರಿಯತ್ತ ತೆರಳುತ್ತಿದ್ದರು. ಈ ವೇಳೆ ಹಣ ಸುಲಿಗೆ ಮಾಡುವ ಉದ್ದೇಶದಿಂದ ಸಂಚು ರೂಪಿಸಿದ್ದ ಜೈಲಿನಲ್ಲಿದ್ದ ಕೈದಿಗಳ ಗ್ಯಾಂಗ್ ಇವರ ಮೇಲೆ ಕ್ಯಾರಂ ಬೋರ್ಡ್, ಸ್ಟೀಲ್ ಡ್ರಮ್, ಪೈಪ್ನಿಂದ ಹಲ್ಲೆ ನಡೆಸಿತ್ತು.
ಆರೋಪಿಗಳು ನವನೀತ ಶೆಟ್ಟಿ ಹಾಗೂ ನಿರಂಜನ್ ಭಟ್ಗೆ ಕೈ ಮತ್ತು ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಲ್ಲದೆ, ನವನೀತ ಶೆಟ್ಟಿಗೆ ಪೈಪ್ನಿಂದ ತಲೆ ಮತ್ತು ಬೆನ್ನಿಗೆ ಹೊಡೆದು ಗಾಯಗೊಳಿಸಿದ್ದರು. ಈ ವೇಳೆ ಬಿಡಿಸಲು ಬಂದ ಜೈಲಿನ ಭದ್ರತಾ ಸಿಬ್ಬಂದಿಯ ಸಮವಸ್ತ್ರ ಹಿಡಿದು ಎಳೆದಾಡಿ, ಸರ್ಕಾರಿ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದರು ಎಂದು ಆರೋಪಿಸಲಾಗಿತ್ತು.
ಇನ್ನು ಹಲ್ಲೆ ನಡೆಸುತ್ತಿದ್ದ ಸಂದರ್ಭ ಆರೋಪಿಗಳು, ಭಾಸ್ಕರ ಶೆಟ್ಟಿ ಕೊಲೆ ಪ್ರಕರಣವನ್ನು ಒಪ್ಪಿಕೊಳ್ಳಬೇಕು, ಇಲ್ಲದಿದ್ದರೆ 5 ಲಕ್ಷ ರೂ. ಹಣ ತರಿಸಿ ಕೊಡಬೇಕು ಎಂದು ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಆರೋಪಿಗಳ ವಿರುದ್ಧ ಬರ್ಕೆ ಠಾಣಾ ಪೊಲೀಸರು ಐಪಿಸಿ ಸೆಕ್ಷನ್ 120(ಬಿ), 143, 147, 148, 341, 323, 324, 384, 506, 307, 353 ಜೊತೆಗೆ 149 ಅಡಿ ಪ್ರಕರಣ ದಾಖಲಿಸಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿತ್ತು.