ಬಂಟ್ವಾಳ, ಸೆ.12 (DaijiworldNews/TA): ಜನರ ಬಳಿಗೆ ಸರ್ಕಾರಿ ಅಧಿಕಾರಿಗಳೇ ತೆರಳಿ ಸಮಸ್ಯೆಗಳನ್ನು ಆಲಿಸಿ, ತ್ವರಿತವಾಗಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಜಾಸೇವೆ ಆಂದೋಲನ ನಡೆಸಲಾಗುತ್ತಿದೆ. ಇದು ಉತ್ತಮ ಕಾರ್ಯವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.

ಬಂಟ್ವಾಳದ ಉಳಿ ಗ್ರಾಮದ ಕಕ್ಯಪದವು ಗ್ರಾಮ ಪಂಚಾಯಿತಿ ಸುವರ್ಣ ಸೌಧದ ಸಭಾಂಗಣದಲ್ಲಿ ನಡೆದ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜಾಸೇವೆ ಆಂದೋಲನದಲ್ಲಿ ಸಾರ್ವಜನಿಕರಿಂದ ಸ್ವೀಕರಿಸಲಾದ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ, ಸಮಸ್ಯೆಗಳ ಇತ್ಯರ್ಥಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜನರ ಸಮಸ್ಯೆಗಳಿಗೆ ಸಾಧ್ಯವಾದಷ್ಟು ಶೀಘ್ರ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು. ಸಭೆಯಲ್ಲಿ ವಿವಿಧ ಇಲಾಖೆಗೆ ಸಂಬಂಧಿಸಿದಂತೆ 100 ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾದವು.
ಎಪಿಎಲ್ ಕಾರ್ಡ್ ಬದಲಾವಣೆ, ರಸ್ತೆ, ಜಾಗದ ಕನ್ವರ್ಷನ್, ಆರ್ಟಿಸಿ ಹೆಸರು ಬದಲಾವಣೆ ಹಾಗೂ ತಿದ್ದುಪಡಿ, ಅಕ್ರಮ–ಸಕ್ರಮ, ಸಾಗುವಳಿ ಚೀಟಿ, ಅಂಗವಿಕಲ ವೇತನ–ಪಿಂಚಣಿ ಸೇರಿದಂತೆ ಹಲವು ಸಮಸ್ಯೆಗಳನ್ನು ಸಾರ್ವಜನಿಕರು ಶಾಸಕರ ಗಮನಕ್ಕೆ ತಂದರು. ಕಕ್ಯಪದವು ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಎರಡು ಬಸ್ ಗಳನ್ನು ಒದಗಿಸುವಂತೆ ಮನವಿ ಸಲ್ಲಿಸಲಾಯಿತು. ವಾಸು ಉಳಿಗ್ರಾಮ ಹಾಗೂ ಕೇಶವ ಅವರು ಅಂಗವಿಕಲ ವೇತನ–ಪಿಂಚಣಿ ಪಾವತಿ ಸಮಸ್ಯೆ ಕುರಿತು ಅರ್ಜಿ ಸಲ್ಲಿಸಿದರು. ಬೀಯಪಾದೆ–ಸರಪಾಡಿ ಭಾಗಕ್ಕೆ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಧನಂಜಯ ಶೆಟ್ಟಿ ಮನವಿ ಮಾಡಿದರು. ಶಾಲೆಗಳಲ್ಲಿ ಅಡುಗೆಗೆ ಬಳಸುವ ಎಣ್ಣೆಯ ಗುಣಮಟ್ಟ ಕಾಯ್ದುಕೊಳ್ಳುವಂತೆ ಹೊನ್ನಪ್ಪ ಕುಂದರ್ ಮನವಿ ಮಾಡಿದರು. ಬೂಡ ಅಧ್ಯಕ್ಷ ಬೇಬಿ ಕುಂದರ್, ತಹಶೀಲ್ದಾರ್ ಮಂಜುನಾಥ್, ಇಒ ಸಚಿನ್ ಉಪಸ್ಥಿತರಿದ್ದರು.