ದಕ್ಷಿಣ ಕನ್ನಡ, ಸೆ.12 (DaijiworldNews/TA): ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ತಾಲೂಕು ಸದ್ಯ ರಾಜ್ಯದ ಬರಪೀಡಿತ ಪಟ್ಟಿಯಲ್ಲಿ ಸೇರ್ಪಡೆಯಾಗದಿರುವುದು ಸಮಾಧಾನಕರ ಸಂಗತಿಯಾದರೂ, ವಾಡಿಕೆಯ ಮಳೆಯ ಪ್ರಮಾಣದಲ್ಲಿ ಉಂಟಾಗಿರುವ ಕುಸಿತ ಕರಾವಳಿ ಜನರಲ್ಲಿ ಆತಂಕ ಮೂಡಿಸಿದೆ. ಮಳೆಗಾಲದ ನಡುವೆಯೇ ಬೇಸಿಗೆಯ ವಾತಾವರಣ ಕಂಡುಬರುತ್ತಿದ್ದು, ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಬಿಸಿಲಿನ ತೀವ್ರತೆ ಹಾಗೂ ತೇವಾಂಶ ಹೆಚ್ಚಾಗಿದೆ.

ಬೆಳಗಿನ ವೇಳೆ ವಾತಾವರಣ ಕೊಂಚ ತಂಪಾಗಿರುವಂತೆ ಕಂಡುಬಂದರೂ, ದಿನ ಮುಂದುವರಿದಂತೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಮಳೆಗಾಲದ ಅವಧಿಯಲ್ಲಿಯೇ ಈ ರೀತಿಯ ವಾತಾವರಣ ಕಂಡುಬರುತ್ತಿರುವುದು ಜನರ ಗಮನ ಸೆಳೆದಿದೆ. ರಾಜ್ಯ ಸರ್ಕಾರ ಪ್ರಕಟಿಸಿರುವ ಮೊದಲ ಹಂತದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ತಾಲೂಕು ಸ್ಥಾನ ಪಡೆದಿಲ್ಲ. ಆಗಸ್ಟ್ನಲ್ಲಿ ಜಿಲ್ಲೆಯ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಮಳೆಗಾಲದ ಆರಂಭದಲ್ಲಿ ಕಂಡುಬಂದ ಮಳೆ ಕೊರತೆಯನ್ನು ಸ್ವಲ್ಪ ಮಟ್ಟಿಗೆ ಸರಿದೂಗಿಸಲು ಇದು ನೆರವಾಗಿದೆ.
ಸೆಪ್ಟೆಂಬರ್ ಅಂತ್ಯದವರೆಗೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ಬಳಿಕ ನೈಋತ್ಯ ಮುಂಗಾರು ಹಿಂತಿರುಗಿ ಈಶಾನ್ಯ ಮುಂಗಾರು ಆರಂಭವಾಗಲಿದೆ. ಆದರೆ, ಈ ಬಾರಿ ಎಲ್ ನಿನೊ ಪ್ರಭಾವದ ಹಿನ್ನೆಲೆಯಲ್ಲಿ ಈಶಾನ್ಯ ಮುಂಗಾರು ಕೂಡ ದುರ್ಬಲವಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಕರಾವಳಿ ಕರ್ನಾಟಕದಲ್ಲಿ ಮಳೆಯ ಪ್ರಮಾಣವನ್ನು ನಿರ್ಧರಿಸುವಲ್ಲಿ ಸಮುದ್ರದಲ್ಲಿ ರೂಪುಗೊಳ್ಳುವ ಕಡಿಮೆ ಒತ್ತಡದ ವ್ಯವಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಅರೇಬಿಯನ್ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿದ್ದ ಕಡಿಮೆ ಒತ್ತಡದ ಪ್ರದೇಶಗಳ ಪರಿಣಾಮವಾಗಿ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗಿತ್ತು.
ಆದರೆ ಕಳೆದ ಎರಡು ವರ್ಷಗಳಲ್ಲಿ ದೇಶದಲ್ಲಿ ಚಂಡಮಾರುತಗಳ ತೀವ್ರತೆ ಹಾಗೂ ಆವರ್ತನದಲ್ಲಿ ಗಣನೀಯ ಬದಲಾವಣೆ ಕಂಡುಬಂದಿದೆ. ಸಮುದ್ರದಲ್ಲಿ ರೂಪುಗೊಳ್ಳುವ ಹಲವು ಕಡಿಮೆ ಒತ್ತಡದ ವ್ಯವಸ್ಥೆಗಳು ಚಂಡಮಾರುತಗಳಾಗಿ ತೀವ್ರಗೊಳ್ಳುವ ಮುನ್ನವೇ ದುರ್ಬಲಗೊಳ್ಳುತ್ತಿವೆ. ಸಾಮಾನ್ಯವಾಗಿ ಮುಂಗಾರು ಹಿಂತಿರುಗಿದ ಬಳಿಕ ಚಳಿಗಾಲದ ವಾತಾವರಣ ನಿಧಾನವಾಗಿ ಆರಂಭವಾಗುತ್ತದೆ. ಆದರೆ ಈ ಬಾರಿ ಹವಾಮಾನದಲ್ಲಿ ಮತ್ತಷ್ಟು ಬದಲಾವಣೆಗಳಾಗುವ ಸಾಧ್ಯತೆಯಿದೆ. ಎಲ್ ನಿನೊ ಪ್ರಭಾವದಿಂದಾಗಿ ಚಳಿಯ ತೀವ್ರತೆ ಕಡಿಮೆಯಾಗಬಹುದು. ತೀವ್ರ ಚಳಿಯ ಬದಲು ಬಿಸಿಲು ಹಾಗೂ ಹೆಚ್ಚಿನ ತೇವಾಂಶ ಮುಂದುವರಿಯುವ ಸಾಧ್ಯತೆಯಿದೆ ಎನ್ನಲಾಗಿದೆ. ಹೀಗಾಗಿ, ಸದ್ಯಕ್ಕೆ ದಕ್ಷಿಣ ಕನ್ನಡ ಬರಪೀಡಿತ ಪಟ್ಟಿಯಿಂದ ಹೊರಗಿದ್ದರೂ, ಮಳೆ ಪ್ರಮಾಣದಲ್ಲಿನ ಬದಲಾವಣೆ, ಹೆಚ್ಚುತ್ತಿರುವ ತಾಪಮಾನ ಹಾಗೂ ತೇವಾಂಶದ ಹಿನ್ನೆಲೆಯಲ್ಲಿ ಮುಂದಿನ ದಿನಗಳ ಹವಾಮಾನ ಪರಿಸ್ಥಿತಿಯ ಮೇಲೆ ನಿಗಾ ಇಡುವ ಅಗತ್ಯವಿದೆ.