ಮಂಗಳೂರು, ಸೆ.14 (DaijiworldNews/TA): ಗಣೇಶ ಚತುರ್ಥಿಯ ಸಂಭ್ರಮದ ನಡುವೆ ತುಳುನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ವಿಶಿಷ್ಟ ಆಚರಣೆಯಾದ ತೆನೆ ಹಬ್ಬ ಅಥವಾ ಕೊರಳು ಹಬ್ಬವೂ ಸಂಭ್ರಮದಿಂದ ನಡೆಯುತ್ತಿದೆ. ಹೊಸದಾಗಿ ಬೆಳೆದ ಭತ್ತದ ತೆನೆಯನ್ನು ದೇವರಿಗೆ ಸಮರ್ಪಿಸಿ, ಬಳಿಕ ಮನೆ, ದೈವಸ್ಥಾನ ಹಾಗೂ ಕೃಷಿ ಉಪಕರಣಗಳಿಗೆ ಕಟ್ಟುವ ಮೂಲಕ ಉತ್ತಮ ಬೆಳೆ ಮತ್ತು ಕುಟುಂಬದ ಸಮೃದ್ಧಿಗಾಗಿ ಪ್ರಾರ್ಥಿಸಲಾಗುತ್ತದೆ.

ತುಳುನಾಡಿನ ವಿವಿಧ ಗ್ರಾಮಗಳು, ಮಾಗಣೆ, ಸೀಮೆ ಹಾಗೂ ದೇವಸ್ಥಾನಗಳಲ್ಲಿ ಸ್ಥಳೀಯ ಸಂಪ್ರದಾಯಗಳಿಗೆ ಅನುಗುಣವಾಗಿ ಈ ಹಬ್ಬವನ್ನು ತಲೆತಲಾಂತರಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ತೆನೆ ಹಬ್ಬದ ಪ್ರಮುಖ ಆಚರಣೆಯಾದ ಕೊರಳುವನ್ನು ಭತ್ತದ ತೆನೆ, ಹಲಸಿನ ಎಲೆ, ಮಾವಿನ ಎಲೆ, ಇಟ್ಟೇವು ಎಲೆ ಹಾಗೂ ದಡ್ಡಾಲು ಮರದ ನಾರು ಬಳಸಿ ತಯಾರಿಸಲಾಗುತ್ತದೆ. ಈ ಕೊರಳನ್ನು ಮೊದಲು ಗ್ರಾಮದ ಪ್ರಧಾನ ದೇವರ ಸನ್ನಿಧಿಗೆ ಕೊಂಡೊಯ್ದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ದೇವಸ್ಥಾನದಲ್ಲಿ ಪೂಜೆಗೊಂಡ ತೆನೆಯನ್ನು ಮನೆಗೆ ತಂದು ಮನೆ, ದೈವಸ್ಥಾನ ಹಾಗೂ ಕೃಷಿ ಉಪಕರಣಗಳಿಗೆ ಕಟ್ಟಲಾಗುತ್ತದೆ. ಕೃಷಿ ಉತ್ತಮವಾಗಲಿ, ಬೆಳೆ ಸಮೃದ್ಧಿಯಾಗಿ ಬರಲಿ ಹಾಗೂ ಕುಟುಂಬದಲ್ಲಿ ಸುಖ-ಸಮೃದ್ಧಿ ನೆಲೆಸಲಿ ಎಂಬುದು ಈ ಆಚರಣೆಯ ಪ್ರಮುಖ ಆಶಯವಾಗಿದೆ. ದೇವಸ್ಥಾನದಿಂದ ಮನೆಗೆ ತಂದ ತೆನೆಯನ್ನು ಮೊದಲು ತುಳಸಿಕಟ್ಟೆಯ ಬಳಿ ಇರಿಸಿ ನಮಸ್ಕರಿಸಲಾಗುತ್ತದೆ. ಮನೆಯ ಗದ್ದೆಯಲ್ಲಿ ಬೆಳೆದ ಭತ್ತದ ತೆನೆಯನ್ನೂ ಇದರೊಂದಿಗೆ ಸೇರಿಸಲಾಗುತ್ತದೆ. ಬಳಿಕ ತುಳಸಿಕಟ್ಟೆಗೆ ಮೂರು ಬಾರಿ ಪ್ರದಕ್ಷಿಣೆ ಹಾಕಿ “ಪೊಲಿ, ಪೊಲಿ” ಎಂದು ಹೇಳುತ್ತಾ ಹೊಸ ತೆನೆಯನ್ನು ಮನೆಯೊಳಗೆ ತರಲಾಗುತ್ತದೆ.
ಮನೆಯ ಚಾವಡಿಯಲ್ಲಿ ಮರದ ಖುರ್ಚಿಯ ಮೇಲೆ ಬಾಳೆ ಎಲೆ ಹಾಸಿ, ಅದರ ಮೇಲೆ ಭತ್ತದ ತೆನೆ, ಮಾವಿನ ಎಲೆ, ಹಲಸಿನ ಎಲೆ, ಇಟ್ಟೇವು ಎಲೆ ಹಾಗೂ ದಡ್ಡಾಲು ನಾರನ್ನು ಇಟ್ಟು ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಈ ವರ್ಷದ ಕೃಷಿ ಉತ್ತಮವಾಗಲಿ, ಬೆಳೆ ಸಮೃದ್ಧಿಯಾಗಲಿ ಹಾಗೂ ಕುಟುಂಬದ ಬದುಕು ಸುಖಮಯವಾಗಲಿ ಎಂದು ದೇವರು-ದೈವಗಳಲ್ಲಿ ಪ್ರಾರ್ಥಿಸಲಾಗುತ್ತದೆ.
ಹೊಸ ಅಕ್ಕಿಯ ಊಟದ ಸಂಭ್ರಮ : ತೆನೆ ಹಬ್ಬದ ಮತ್ತೊಂದು ವಿಶೇಷವೆಂದರೆ ಹೊಸ ಅಕ್ಕಿಯ ಊಟ. ಹೊಸದಾಗಿ ದೊರೆತ ಭತ್ತದಿಂದ ತಯಾರಿಸಿದ ಅಕ್ಕಿಯೊಂದಿಗೆ ವಿವಿಧ ತರಕಾರಿಗಳ ಪದಾರ್ಥ, ಪಾಯಸ ಸೇರಿದಂತೆ ವಿಶೇಷ ಭೋಜನವನ್ನು ಸಿದ್ಧಪಡಿಸಲಾಗುತ್ತದೆ. ಈ ಆಹಾರವನ್ನು ಮೊದಲು ದೇವರಿಗೆ ನೈವೇದ್ಯವಾಗಿ ಅರ್ಪಿಸಿ, ಬಳಿಕ ಪ್ರಸಾದವಾಗಿ ಸೇವಿಸಲಾಗುತ್ತದೆ. ಹೀಗಾಗಿ ತೆನೆ ಹಬ್ಬವು ಕೇವಲ ಧಾರ್ಮಿಕ ಆಚರಣೆಯಾಗದೆ, ಹೊಸ ಬೆಳೆ, ರೈತನ ಶ್ರಮ ಹಾಗೂ ಕೃಷಿ ಬದುಕಿನ ಸಂಭ್ರಮವಾಗಿಯೂ ಗುರುತಿಸಿಕೊಂಡಿದೆ.
ತುಳುನಾಡಿನ ತೆನೆ ಹಬ್ಬದಲ್ಲಿ ದೇವರ ಆರಾಧನೆ, ಹೊಸ ಬೆಳೆ, ರೈತನ ಶ್ರಮ ಮತ್ತು ಕುಟುಂಬದ ಸಮೃದ್ಧಿ ಒಂದೇ ಸಂಪ್ರದಾಯದಲ್ಲಿ ಒಂದಾಗುತ್ತವೆ. ಹೊಸದಾಗಿ ಬೆಳೆದ ತೆನೆಯನ್ನು ದೇವರಿಗೆ ಸಮರ್ಪಿಸಿ ಅದನ್ನು ಮನೆಗೆ ತರುವ ಮೂಲಕ, “ಈ ಬೆಳೆ ನಮ್ಮ ಬದುಕನ್ನೂ ಸಮೃದ್ಧಿಗೊಳಿಸಲಿ” ಎಂಬ ಆಶಯವನ್ನು ಈ ಆಚರಣೆ ಸಾರುತ್ತದೆ. ಅದಕ್ಕಾಗಿಯೇ ತೆನೆ ಹಬ್ಬ ಅಥವಾ ಕೊರಳು ಹಬ್ಬ ತುಳುನಾಡಿನ ಕೃಷಿ ಹಾಗೂ ಜನಪದ ಸಂಸ್ಕೃತಿಯಲ್ಲಿ ಇಂದಿಗೂ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಉಳಿಸಿಕೊಂಡಿದೆ.