ಮಂಗಳೂರು, ಸೆ.14 (DaijiworldNews/TA): ನಗರದ ಐತಿಹಾಸಿಕ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಪೂಜಿಸಲ್ಪಡುವ ಶಾರದಾ ಮಾತೆಯ ಭವ್ಯ ಮೂರ್ತಿ ರಚನೆಗೆ ಗಣೇಶ ಚತುರ್ಥಿಯ ಪವಿತ್ರ ದಿನದಂದು ವಿಧ್ಯುಕ್ತವಾಗಿ ಮುಹೂರ್ತ ನೆರವೇರಿಸಲಾಯಿತು.

ಕ್ಷೇತ್ರದ ಸಂಪ್ರದಾಯದಂತೆ ಶಾರದಾ ಮಾತೆಯ ಮೂರ್ತಿ ರಚನಾ ಕಾರ್ಯಕ್ಕೆ ಚಾಲನೆ ನೀಡುವ ಮುನ್ನ ವಿಶೇಷ ಪ್ರಾರ್ಥನೆ ಹಾಗೂ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಕ್ಷೇತ್ರದ ಆಡಳಿತ ಮಂಡಳಿ ಪದಾಧಿಕಾರಿಗಳು, ಸೇವಾದಳದ ಸದಸ್ಯರು ಹಾಗೂ ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಶ್ರೀ ಗೋಕರ್ಣನಾಥ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ ಕಾವೂರು, ಉಪಾಧ್ಯಕ್ಷ ಜಯರಾಮ ಕಾರಂದೂರು ಸೇರಿದಂತೆ ಗೋಕರ್ಣನಾಥ ಸೇವಾದಳದ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದು ಪ್ರಾರ್ಥನೆ ಸಲ್ಲಿಸಿದರು.
ನವರಾತ್ರಿ ಸಂದರ್ಭದಲ್ಲಿ ಕುದ್ರೋಳಿ ಕ್ಷೇತ್ರದಲ್ಲಿ ಶಾರದಾ ಮಾತೆಯ ಆರಾಧನೆ ವಿಶೇಷ ಆಕರ್ಷಣೆಯಾಗಿದ್ದು, ಪ್ರತಿವರ್ಷ ಸಾವಿರಾರು ಭಕ್ತರು ಶಾರದಾ ಮಾತೆಯ ದರ್ಶನ ಪಡೆಯಲು ಕ್ಷೇತ್ರಕ್ಕೆ ಆಗಮಿಸುತ್ತಾರೆ. ಗಣೇಶ ಚತುರ್ಥಿಯ ಶುಭ ದಿನದಂದು ಮೂರ್ತಿ ರಚನೆಗೆ ಮುಹೂರ್ತ ನೆರವೇರಿಸುವ ಮೂಲಕ ಈ ವರ್ಷದ ನವರಾತ್ರಿ ಮಹೋತ್ಸವದ ಸಿದ್ಧತೆಗಳಿಗೆ ಅಧಿಕೃತ ಚಾಲನೆ ದೊರೆತಂತಾಗಿದೆ.