ಪುತ್ತೂರು, ಸೆ.14 (DaijiworldNews/TA): ತಾಲೂಕಿನ ನೆಕ್ಕಿಲಾಡಿ ಗ್ರಾಮದ ದರ್ಬೆ ಬಳಿ ಸೆಪ್ಟೆಂಬರ್ 13ರಂದು ಚಿರತೆಯೊಂದು ಕಾಣಿಸಿಕೊಂಡಿದ್ದು, ನಾಯಿಯೊಂದನ್ನು ಬೇಟೆಯಾಡಿ ಕಾಡಿನತ್ತ ಎಳೆದೊಯ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ದರ್ಬೆ ನಿವಾಸಿ ನಾಗರಾಜ್ ಎಂಬವರು ಚಿರತೆ ನಾಯಿಯನ್ನು ಹೊತ್ತುಕೊಂಡು ಎಳೆಯುತ್ತಿದ್ದುದನ್ನು ನೋಡಿರುವುದಾಗಿ ಹೇಳಲಾಗಿದೆ. ಈ ವೇಳೆ ನಾಲ್ಕೈದು ನಾಯಿಗಳು ಬೊಗಳುತ್ತಾ ಚಿರತೆಯನ್ನು ಬೆನ್ನಟ್ಟಿದ್ದವು ಎನ್ನಲಾಗಿದೆ. ಬಳಿಕ ಚಿರತೆ ನಾಯಿಯನ್ನು ಚೀಮುಲ್ಲು ಮತ್ತು ಅನೋದ್ಗುಂಡಿ ಭಾಗದತ್ತ ಕೊಂಡೊಯ್ದಿದೆ ಎಂದು ಸ್ಥಳೀಯರು ಶಂಕಿಸಿದ್ದಾರೆ.
ಚಿರತೆ ಕಾಣಿಸಿಕೊಂಡಿರುವ ಪ್ರದೇಶದ ಸುತ್ತಮುತ್ತ ಸಾಮಾಜಿಕ ಅರಣ್ಯವಿದ್ದು, ಈ ಭಾಗದಲ್ಲಿ ಈ ಹಿಂದೆ ಕಾಡುಪ್ರಾಣಿಗಳ ಓಡಾಟದ ವರದಿಗಳೂ ಕೇಳಿಬಂದಿವೆ. ಸುಮಾರು ಎರಡು ವರ್ಷಗಳ ಹಿಂದೆ ಎರಡು ಆನೆಗಳು ಈ ಪ್ರದೇಶಕ್ಕೆ ಪ್ರವೇಶಿಸಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೀಗ ಚಿರತೆ ಕಾಣಿಸಿಕೊಂಡಿರುವ ಸುದ್ದಿ ಸ್ಥಳೀಯರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಇದಕ್ಕೂ ಸುಮಾರು ಒಂದು ವಾರದ ಹಿಂದೆ 34 ನೆಕ್ಕಿಲಾಡಿ ಗ್ರಾಮದ ಸೀಮಾ ಕಾಂಪೌಂಡ್ ಪ್ರದೇಶದಲ್ಲಿರುವ ಹಮೀದ್ ಪರನೀರು ಅವರ ಮನೆಯ ಕಾರು ಪಾರ್ಕಿಂಗ್ ಸ್ಥಳದ ಬಳಿ ಕಾಡುಪ್ರಾಣಿಯದ್ದೆಂದು ಶಂಕಿಸಲಾದ ಹೆಜ್ಜೆಗುರುತುಗಳು ಪತ್ತೆಯಾಗಿದ್ದವು. ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆಯ ದೃಶ್ಯ ಸೆರೆಯಾಗಿಲ್ಲ. ಆದರೆ ಚಿರತೆಯ ಘರ್ಜನೆಯನ್ನು ಹೋಲುವ ಶಬ್ದ ದಾಖಲಾಗಿದೆ ಎಂದು ವರದಿಯಾಗಿದೆ. ಹೀಗಾಗಿ ಪತ್ತೆಯಾದ ಹೆಜ್ಜೆಗುರುತುಗಳು ಚಿರತೆಯದ್ದೇ ಇರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಸತತವಾಗಿ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ನೆಕ್ಕಿಲಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ರಾತ್ರಿ ವೇಳೆ ಸಂಚರಿಸುವಾಗ ಎಚ್ಚರಿಕೆ ವಹಿಸುವಂತೆ ಸ್ಥಳೀಯರು ಪರಸ್ಪರ ಸೂಚಿಸುತ್ತಿದ್ದಾರೆ.