ಮಂಗಳೂರು, ಸೆ.14 (DaijiworldNews/AA): ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಧಾನಸಭಾ ಕ್ಷೇತ್ರದ (ಉಳ್ಳಾಲ) ವ್ಯಾಪ್ತಿಯಲ್ಲಿರುವ ಬೂತ್ನಲ್ಲಿ ಯಾವುದೇ ಮತದಾರರಿಗೆ ಒಂದೇ ಒಂದು ನೋಟಿಸ್ ಕೂಡ ನೀಡದೆ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ರಾಜ್ಯದಲ್ಲೇ ವಿಶಿಷ್ಟ ಸಾಧನೆ ಮಾಡಿ ಮಾದರಿಯಾಗಿದೆ.

ಉಳ್ಳಾಲ ನಗರಸಭೆಯ ವಾರ್ಡ್ ನಂ. 3ರ ಸೇನೆರೆಬೈಲು-1ರ ಬೂತ್ ಸಂಖ್ಯೆ 7ರಲ್ಲಿ ಈ ಸಾಧನೆ ದಾಖಲಾಗಿದೆ. ಈ ಮತಗಟ್ಟೆಯಲ್ಲಿ ಶೂನ್ಯ ಮ್ಯಾಪಿಂಗ್ ಹಾಗೂ ಶೂನ್ಯ ತಾರ್ಕಿಕ ವ್ಯತ್ಯಾಸಗಳು ಕಂಡುಬಂದಿವೆ. ಯಾವುದೇ ಮತದಾರರಿಗೆ ನೋಟಿಸ್ ನೀಡಲಾಗಿಲ್ಲ ಮತ್ತು ಮತದಾರರ ಪಟ್ಟಿಯಿಂದ ಯಾವುದೇ ಹೆಸರನ್ನೂ ತೆಗೆದುಹಾಕಲಾಗಿಲ್ಲ.
ಉಳ್ಳಾಲ ಕೋಡಿ ಮಸೀದಿ ಸಮೀಪದ ಅಂಗನವಾಡಿ ಶಿಕ್ಷಕಿಯಾಗಿರುವ ಬಿಎಲ್ಒ ಅಮೃತಾ ರಾಹುಲ್ ಕರ್ಕೇರ ಅವರು ಎಸ್ಐಆರ್ ಪ್ರಕ್ರಿಯೆ ಕುರಿತ ಗೊಂದಲಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಮನೆ ಮನೆಗೆ ತೆರಳಿ ಮತದಾರರನ್ನು ಭೇಟಿಯಾಗಿ, ಅಗತ್ಯ ಮಾಹಿತಿಯನ್ನು ಒದಗಿಸುವುದು, ಅರ್ಜಿಗಳನ್ನು ಭರ್ತಿ ಮಾಡುವುದು ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಕುರಿತು ಸೂಕ್ತ ಮಾರ್ಗದರ್ಶನ ನೀಡಿದರು. ಈ ಮೂಲಕ ಮತಗಟ್ಟೆಯಲ್ಲಿ ಶೇ.100ರಷ್ಟು ನಿಖರತೆಯನ್ನು ಸಾಧಿಸಲು ಸಾಧ್ಯವಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಒಟ್ಟು 1,447 ಮತದಾರರು ಇದ್ದರು. ಮತದಾರರ ಸಂಖ್ಯೆ 1,000ಕ್ಕಿಂತ ಹೆಚ್ಚಿದ್ದ ಹಿನ್ನೆಲೆಯಲ್ಲಿ ಮತಗಟ್ಟೆಯನ್ನು ವಿಭಜಿಸಲಾಯಿತು. ಈ ಪೈಕಿ 514 ಮತದಾರರನ್ನು ಮತಗಟ್ಟೆ ಸಂಖ್ಯೆ 6ಕ್ಕೆ ಹಾಗೂ 782 ಮತದಾರರನ್ನು ಮತಗಟ್ಟೆ ಸಂಖ್ಯೆ 7ಕ್ಕೆ ಹಂಚಿಕೆ ಮಾಡಲಾಯಿತು.
ಮನೆ ಮನೆಗೆ ನಡೆಸಿದ ಸಮೀಕ್ಷೆಯ ವೇಳೆ ಮೃತಪಟ್ಟಿರುವ ಅಥವಾ ಬೇರೆಡೆಗೆ ಸ್ಥಳಾಂತರಗೊಂಡಿರುವ ಮತದಾರರನ್ನು ಗುರುತಿಸಲಾಯಿತು. ಈ ಮೂಲಕ ಮತದಾರರ ಪಟ್ಟಿಯನ್ನು ಹಂತ ಹಂತವಾಗಿ ಪರಿಶೀಲಿಸಿ, ವ್ಯವಸ್ಥಿತವಾಗಿ ತಿದ್ದುಪಡಿ ಮತ್ತು ನವೀಕರಿಸಲಾಯಿತು.
ಮತದಾರರಿಗೆ ಎಸ್ಐಆರ್ ಪ್ರಕ್ರಿಯೆಯ ಕುರಿತು ಮುಂಚಿತವಾಗಿ ಸೂಕ್ತ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದ ಪರಿಣಾಮ, ಯಾವುದೇ ನೋಟಿಸ್ ನೀಡುವ ಅಗತ್ಯ ಎದುರಾಗದೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಯಿತು.