ಮಂಗಳೂರು, ಸೆ.14 (DaijiworldNews/AA): ಗಣೇಶ ಚತುರ್ಥಿಯ ಅಂಗವಾಗಿ ಮಕ್ಕಳಲ್ಲಿ ಕಲಾ ಪ್ರತಿಭೆ, ಸೃಜನಶೀಲತೆ ಹಾಗೂ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಆವೆ ಮಣ್ಣಿನ ಗಣೇಶ ಮೂರ್ತಿ ತಯಾರಿಕಾ ಸ್ಪರ್ಧೆಯನ್ನು ಶರಧಿ ಪ್ರತಿಷ್ಠಾನ (ರಿ) ಹಾಗೂ ಕರಾವಳಿ ಚಿತ್ರಕಲಾ ಚಾವಡಿ (ರಿ) ಮಂಗಳೂರು ವತಿಯಿಂದ ರವಿವಾರ ಆಯೋಜಿಸಲಾಯಿತು.





ಸುಮಾರು 120 ಮಕ್ಕಳು ಉತ್ಸಾಹದಿಂದ ಭಾಗವಹಿಸಿ ಮಣ್ಣಿನಿಂದ ವಿವಿಧ ಆಕರ್ಷಕ ವಿನ್ಯಾಸಗಳ ಗಣೇಶ ಮೂರ್ತಿಗಳನ್ನು ತಯಾರಿಸಿದರು. ತಮ್ಮ ಕಲ್ಪನೆ ಹಾಗೂ ಕೈಚಳಕದ ಮೂಲಕ ಮೂರ್ತಿಗಳಿಗೆ ರೂಪ ನೀಡಿದ ಮಕ್ಕಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.
ಕಾರ್ಯಕ್ರಮದಲ್ಲಿ ಕಾರ್ಪೊರೇಟರ್ ಕಿರಣ್ ಕುಮಾರ್ ಕೋಡಿಕಲ್, ಸೌಜನ್ಯಾ ಹೆಗ್ಡೆ , ಗಣೇಶ ಸೋಮಯಾಜಿ, ಕೋಟಿ ಪ್ರಸಾದ್ ಆಳ್ವ, ಪುನೀಕ್ ಶೆಟ್ಟಿ ಹಾಗೂ ಮುಂಬೈನ ಖ್ಯಾತ ಕಲಾವಿದ ಮಧುಸೂಧನ್ ಉಪಸ್ಥಿತರಿದ್ದು, ಮಕ್ಕಳ ಕಲಾ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡಿದರು. ಕಲಾವಿದ ನವೀನ್ ಬಂಗೇರ ಅವರು ಮಕ್ಕಳಿಗೆ ಮಣ್ಣಿನಿಂದ ಗಣೇಶ ಮೂರ್ತಿ ತಯಾರಿಸುವ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಕಲೆಯ ಮೇಲಿನ ಆಸಕ್ತಿ ಬೆಳೆಸುವುದರ ಜೊತೆಗೆ ನಮ್ಮ ಸಂಸ್ಕೃತಿ ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿಕೊಡಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು. ಯೋಗ ಗುರು ಜಗದೀಶ್ ಶೆಟ್ಟಿ ಇವರು ಕಾರ್ಯಕ್ರಮ ನಿರ್ವಹಣೆಗೈದರು. ಕರಾವಳಿ ಚಿತ್ರಕಲಾ ಚಾವಡಿ ಕಲಾವಿದರ ಚಿತ್ರಕಲಾ ಪ್ರದರ್ಶನ ಎಲ್ಲರ ಗಮನ ಸೆಳೆದಿದ್ದು, ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕೊನೆಯಲ್ಲಿ ಬಹುಮಾನ ವಿತರಿಸಲಾಯಿತು.