ಮಂಗಳೂರು, ಸೆ.14 (DaijiworldNews/AA): ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಐದನೇ ವರ್ಷದ 'ಕುರಲ್ ಪರ್ಬ – ತೆನೆ ಮತ್ತು ಕಬ್ಬು ವಿತರಣಾ ಕಾರ್ಯಕ್ರಮ' ಮಂಗಳೂರು ಮಹಾನಗರ ಪಾಲಿಕೆಯ 51ನೇ ಅಳಪೆ ವಾರ್ಡ್ನ ಕಣ್ಣಗುಡ್ಡೆಯ ಕೊರಗಜ್ಜ ಶ್ರೀ ಸ್ವಾಮಿ ಕೊರಗ ತನಿಯ ಕ್ಷೇತ್ರದಲ್ಲಿ ಸಂಭ್ರಮದಿಂದ ನಡೆಯಿತು.





ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಡೆನಿಸ್ ಡಿ’ಸಿಲ್ವಾ ಅವರು ಸಾರ್ವಜನಿಕರಿಗೆ ತೆನೆ ಮತ್ತು ಕಬ್ಬು ವಿತರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಚೌತಿ ಹಬ್ಬದ ಸಂದರ್ಭದಲ್ಲಿ ತೆನೆ ಮತ್ತು ಕಬ್ಬನ್ನು ಮನೆಗೆ ಕೊಂಡೊಯ್ಯುವುದು ಕೇವಲ ಸಂಪ್ರದಾಯವಲ್ಲ; ಅದು ಮನೆ ತುಂಬಿಸುವ ಸಮೃದ್ಧಿಯ ಸಂಕೇತವಾಗಿದೆ. ಹೊಸ ತೆನೆ ರೈತನ ಪರಿಶ್ರಮ ಮತ್ತು ಅನ್ನದ ಮಹತ್ವವನ್ನು ಸಾರಿದರೆ, ಕಬ್ಬು ಕುಟುಂಬದಲ್ಲಿ ಸಿಹಿ, ಸಂತೋಷ ಹಾಗೂ ಬಾಂಧವ್ಯ ಸದಾ ನೆಲೆಸಲಿ ಎಂಬ ಆಶಯವನ್ನು ಪ್ರತಿನಿಧಿಸುತ್ತದೆ. ಈ ಆಚರಣೆಯು ಕೃಷಿ, ರೈತರು ಹಾಗೂ ತುಳುನಾಡಿನ ಶ್ರೀಮಂತ ಸಂಸ್ಕೃತಿಗೆ ಸಲ್ಲಿಸುವ ಗೌರವವಾಗಿದೆ" ಎಂದು ಹೇಳಿ, ಸರ್ವರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯ ಕೋರಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಟಿ. ಕೆ. ಸುಧೀರ್ ಅವರು ಮಾತನಾಡಿ, "ಡೆನಿಸ್ ಡಿ'ಸಿಲ್ವಾ ಅವರು ಕಳೆದ ಐದು ವರ್ಷಗಳಿಂದ ಚೌತಿ ಹಬ್ಬದ ಸಂದರ್ಭದಲ್ಲಿ ಈ ಭಾಗದ ಜನರಿಗೆ ತೆನೆ ಮತ್ತು ಕಬ್ಬು ವಿತರಿಸುವ ಮೂಲಕ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಸೇವೆ ನಿರಂತರವಾಗಿ ಮುಂದುವರಿಯಲಿ ಹಾಗೂ ಈ ಭಾಗದ ಜನರ ಸಂಕಷ್ಟಗಳು ದೂರವಾಗಿ ಎಲ್ಲರಿಗೂ ಉತ್ತಮ ಆರೋಗ್ಯ, ನೆಮ್ಮದಿ ಮತ್ತು ಸಂತೋಷ ಲಭಿಸಲಿ" ಎಂದು ಹಾರೈಸಿದರು.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ರಮಾನಂದ ಪೂಜಾರಿ ಅವರು ಮಾತನಾಡಿ, "ಗಣೇಶ ಚತುರ್ಥಿಯು ವಿಶ್ವದಾದ್ಯಂತ ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲ್ಪಡುವ ಹಬ್ಬವಾಗಿದೆ. ವಿಘ್ನನಿವಾರಕ ಶ್ರೀ ಗಣೇಶನ ಆಶೀರ್ವಾದ ಸದಾ ಎಲ್ಲರ ಮೇಲಿರಲಿ ಹಾಗೂ ಜನರ ಆಶೋತ್ತರಗಳು ಈಡೇರಲಿ" ಎಂದು ಶುಭ ಹಾರೈಸಿದರು.
ಶೇಖರ್ ಪೂಜಾರಿ ಅವರು ಕೊರಗಜ್ಜ ಶ್ರೀ ಸ್ವಾಮಿ ಕೊರಗ ತನಿಯ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿ ಕಾರ್ಯಕ್ರಮದ ಯಶಸ್ಸಿಗಾಗಿ ಆಶೀರ್ವಾದ ಕೋರಿದರು.
ಕಾರ್ಯಕ್ರಮದಲ್ಲಿ ಅಳಪೆ ವಾರ್ಡ್ ಮಾಜಿ ಕಾರ್ಪೊರೇಟರ್ ಬಿ. ಪ್ರಕಾಶ್, ಕಾರ್ಯಕ್ರಮದ ಸಂಚಾಲಕ ಪದ್ಮನಾಭ ಕರ್ಕೇರ ನೂಜಿ, ಸಹ ಸಂಚಾಲಕ ರಿತೇಶ್ ಬಿ. ಎನ್., ಮುಖಂಡರಾದ ವಿಕ್ಕಿ ಪೂಜಾರಿ, ಉಮೇಶ್ ನೂಜಿ, ನವೀನ್ ಕಂಡೇವು, ಅಶೋಕ್ ನಾಯಕ್, ಮಿಥುನ್, ಮಹೇಶ್ ಶೆಟ್ಟಿ, ಸದಾನಂದ (ಬಾಬು) ಹಾಗೂ ಸುಲೋಚನಾ ದೇವದಾಸ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕಣ್ಣಗುಡ್ಡೆ, ನೂಜಿ, ಕೊಡಕ್ಕಲ್, ಕಂಡೇವು, ಸರಿಪಳ್ಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತೆನೆ ಮತ್ತು ಕಬ್ಬನ್ನು ಸ್ವೀಕರಿಸಿದರು.
ರಿತೇಶ್ ಬಿ. ಎನ್. ಸ್ವಾಗತಿಸಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮದ ಮಹತ್ವ ಹಾಗೂ ತುಳುನಾಡಿನ ಸಂಸ್ಕೃತಿಯ ಕುರಿತು ವಿವರಣೆ ನೀಡುತ್ತಾ ಕಾರ್ಯಕ್ರಮ ನಿರೂಪಿಸಿದರು.