Karavali
ಮಂಗಳೂರಿನ ಸಚಿವ ಸಂಪುಟ ಸಭೆ: ಕರಾವಳಿ ಅಭಿವೃದ್ಧಿಗೆ ಹಲವು ಮಹತ್ವದ ಯೋಜನೆಗಳಿಗೆ ಅನುಮೋದನೆ
- Fri, Sep 18 2026 09:55:14 PM
-
ಮಂಗಳೂರು, ಸೆ.18 (DaijiworldNews/AA): ಶುಕ್ರವಾರ ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಪ್ರವಾಸೋದ್ಯಮ, ದ್ವೀಪಗಳ ಅಭಿವೃದ್ಧಿ, ಮೂಲಸೌಕರ್ಯ, ಮೀನುಗಾರಿಕೆ, ಬಂದರುಗಳು, ಶಿಕ್ಷಣ, ಕುಡಿಯುವ ನೀರು, ನಗರಾಭಿವೃದ್ಧಿ ಹಾಗೂ 'ಬ್ಲೂ ಎಕಾನಮಿ' ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಮಹತ್ವದ ಯೋಜನೆಗಳು ಮತ್ತು ಪ್ರಸ್ತಾವನೆಗಳಿಗೆ ಕರ್ನಾಟಕ ಸಚಿವ ಸಂಪುಟ ಅನುಮೋದನೆ ನೀಡಿದೆ.


ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಕುರಿತು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
12 ಕರಾವಳಿ ದ್ವೀಪಗಳ ಅಭಿವೃದ್ಧಿ
ಕರಾವಳಿ ಪ್ರವಾಸೋದ್ಯಮವನ್ನು ಬಲಪಡಿಸುವ ಉದ್ದೇಶದಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ 12 ದ್ವೀಪಗಳನ್ನು ಅಭಿವೃದ್ಧಿಪಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.ಕಾನೂನುಬದ್ಧ ಅನುಮತಿಗಳನ್ನು ಪಡೆದ ಬಳಿಕ ಡಿಸೈನ್-ಬಿಲ್ಡ್-ಫೈನಾನ್ಸ್-ಆಪರೇಟ್-ಟ್ರಾನ್ಸ್ಫರ್ (DBFOT) ಆಧಾರದ ಮೇಲೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ನಿರ್ಮಾಣ ಅವಧಿ ಸೇರಿದಂತೆ 30 ವರ್ಷಗಳ ಗುತ್ತಿಗೆ ಅವಧಿಯನ್ನು ಪ್ರಸ್ತಾಪಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನಲ್ಲಿ ಗುರುಪುರ ನದಿಯ ಉತ್ತರ ಮತ್ತು ದಕ್ಷಿಣ ದ್ವೀಪಗಳನ್ನು 125.43 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. 30.42 ಎಕರೆ ಪ್ರದೇಶದಲ್ಲಿರುವ ಉತ್ತರ ದ್ವೀಪದಲ್ಲಿ 30 ಬೋಟ್ಗಳಿಗೆ ಅವಕಾಶವಿರುವ ಮರೀನಾ ನಿರ್ಮಿಸಲಾಗುವುದು. 17.28 ಎಕರೆ ಪ್ರದೇಶದಲ್ಲಿರುವ ದಕ್ಷಿಣ ದ್ವೀಪದಲ್ಲಿ 32 ಪರಿಸರ ಸ್ನೇಹಿ ಗುಡಿಸಲುಗಳನ್ನು ನಿರ್ಮಿಸಲಾಗುವುದು.
ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಭಟ್ಕಳ ಮತ್ತು ಅಂಕೋಲಾ ತಾಲೂಕುಗಳ ಮಧ್ಯಲಿಂಗಾಡ್, ದೇವಗಡ, ಹೊಗ್, ಮೊಂಗೆರ್ಗುಡ್ಡ, ಕಿರಿಕುಂಡ್, ಅಂಕಣೆ ಚೆಗ್ಗುಡು ಮತ್ತು ಕುರುಮಗಡ ದ್ವೀಪಗಳನ್ನು ಸುಮಾರು 59 ಎಕರೆ 31 ಗುಂಟೆ ಪ್ರದೇಶದಲ್ಲಿ 307.71 ರೂ. ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.
ಉಡುಪಿ ಜಿಲ್ಲೆಯಲ್ಲಿ ಆಯಬ್ಬ, ದರಿಯಾ, ಬಹದ್ದೂರ್ಗಡ ಮತ್ತು ಮಲ್ಪೆ ದ್ವೀಪಗಳಲ್ಲಿ ಸುಮಾರು 26.69 ಎಕರೆ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮ ಸೌಲಭ್ಯಗಳನ್ನು 279.03 ರೂ. ಕೋಟಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.
ಮಂಗಳೂರು ಲೈಟ್ಹೌಸ್ ಪ್ರವಾಸೋದ್ಯಮ ಯೋಜನೆ
ಮಂಗಳೂರು ಲೈಟ್ಹೌಸ್ ಸುತ್ತಮುತ್ತಲಿನ 1.5 ಎಕರೆ ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತು ಆತಿಥ್ಯ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುವುದು.PPP ಮಾದರಿಯಲ್ಲಿ DBFOT ಆಧಾರದ ಮೇಲೆ ಜಾರಿಗೊಳ್ಳಲಿರುವ ಈ 60.34 ಕೋಟಿ ರೂ. ಯೋಜನೆಯಲ್ಲಿ ಕನಿಷ್ಠ ಮೂರು ನಕ್ಷತ್ರ ದರ್ಜೆಯ 35 ಕೊಠಡಿಗಳ ಸೌಲಭ್ಯವನ್ನು ನಿರ್ಮಿಸಲಾಗುವುದು. ಲೈಟ್ಹೌಸ್ ಸಂರಕ್ಷಣೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆಯಲ್ಲಿ ಆದ್ಯತೆ ನೀಡಲಾಗುವುದು.
ನಾಲ್ಕು ಪ್ರಮುಖ ಪ್ರವಾಸೋದ್ಯಮ ಯೋಜನೆಗಳಿಗೆ ಅನುಮೋದನೆ
ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ನಾಲ್ಕು ಸ್ಥಳಗಳಲ್ಲಿ ಒಟ್ಟು ೨೩೮ ಕೋಟಿ ರೂ. ವೆಚ್ಚದ ಪ್ರವಾಸೋದ್ಯಮ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.ಮಂಗಳೂರಿನ ಕೊಡಿಕಲ್ನಲ್ಲಿ 16.5 ಎಕರೆ ಪ್ರದೇಶದಲ್ಲಿ ರಿವರ್ಫ್ರಂಟ್ ವೆಲ್ನೆಸ್ ರೆಸಾರ್ಟ್ - 73 ಕೋಟಿ ರೂ.
ತಣ್ಣೀರುಬಾವಿಯಲ್ಲಿ 4.97 ಎಕರೆ ಪ್ರದೇಶದಲ್ಲಿ ಪರಿಸರ ಸ್ನೇಹಿ ಬೀಚ್ಫ್ರಂಟ್ ಗ್ಲ್ಯಾಂಪಿಂಗ್, ಸಮುದ್ರ ಅನುಭವ ಕೇಂದ್ರ ಹಾಗೂ ಎಕ್ಸ್ಪೋ ವಲಯ - 53 ಕೋಟಿ ರೂ.
ಉಡುಪಿ ಜಿಲ್ಲೆಯ ತ್ರಾಸಿ-ಮರವಂತೆ ಪ್ರದೇಶದಲ್ಲಿ ರೆಸಾರ್ಟ್, ಸಾಹಸ ಮತ್ತು ಮನರಂಜನಾ ಸೌಲಭ್ಯಗಳು - 48 ಕೋಟಿ ರೂ.
ಚಿಕ್ಕಮಗಳೂರು ಜಿಲ್ಲೆಯ ರಾವೂರಿನಲ್ಲಿ ಇಕೋ-ರೆಸಾರ್ಟ್ - 64 ಕೋಟಿ ರೂ.
ಸುರತ್ಕಲ್ ಬಳಿ ವೆಂಕಟೇಶ್ವರ ದೇವಸ್ಥಾನ
ಸುರತ್ಕಲ್ ಹೋಬಳಿಯ ಬಡಗ ಯೆಕ್ಕಾರು ಗ್ರಾಮದಲ್ಲಿ 10 ಎಕರೆ ಜಮೀನನ್ನು ತಿರುಮಲ ತಿರುಪತಿ ದೇವಸ್ಥಾನಗಳಿಗೆ ಮಂಜೂರು ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.ಈ ಜಾಗದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಹಾಗೂ ಕಲ್ಯಾಣ ಮಂಟಪ ನಿರ್ಮಿಸಲು ಉದ್ದೇಶಿಸಲಾಗಿದೆ.
ಒಳನಾಡು ಜಲಸಾರಿಗೆ ನಿಯಮಗಳು
'ಜನ ವಿಶ್ವಾಸ್' ಚೌಕಟ್ಟಿನಡಿ ಅಪರಾಧೀಕರಣ ಕಡಿತಗೊಳಿಸುವ ನಿಯಮಗಳಿಗೆ ಅನುಗುಣವಾಗಿ ಕರ್ನಾಟಕ ಒಳನಾಡು ಜಲಯಾನ ನೌಕೆಗಳ (ದಂಡಗಳ ನಿರ್ಣಯ ಮತ್ತು ಮೇಲ್ಮನವಿ) ನಿಯಮಗಳು, 2026 ಅನ್ನು ಅಧಿಸೂಚನೆ ಹೊರಡಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.ಬಂದರುಗಳ ನಿರ್ದೇಶಕರು ತೀರ್ಪು ನೀಡುವ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದು, ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೇಲ್ಮನವಿ ಪ್ರಾಧಿಕಾರಿಯಾಗಿರುತ್ತಾರೆ.
ನಿಯಮ ಉಲ್ಲಂಘನೆಗಳ ಕುರಿತು ನಿಗದಿತ ಅವಧಿಯಲ್ಲಿ ತೀರ್ಪು ನೀಡುವುದು ಹಾಗೂ ದಂಡ ವಿಧಿಸುವ ವ್ಯವಸ್ಥೆಯನ್ನು ನಿಯಮಗಳು ಒಳಗೊಂಡಿವೆ. ಕರಾವಳಿ ಮತ್ತು ಒಳನಾಡು ಜಲಮಾರ್ಗಗಳಲ್ಲಿ ಸಂಚರಿಸುವ ನೌಕೆಗಳ ಸುರಕ್ಷತೆ, ನೋಂದಣಿ ಹಾಗೂ ನೌಕಾಯಾನ ನಿಯಮಗಳನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ.
ಕರಾವಳಿ ವಲಯ ನಿರ್ವಹಣಾ ಯೋಜನೆ ಪರಿಷ್ಕರಣೆ
CRZ ಅಧಿಸೂಚನೆ 2019ರ ಅಡಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕರಾವಳಿ ವಲಯ ನಿರ್ವಹಣಾ ಯೋಜನೆ 2019 ಅನ್ನು ಪರಿಷ್ಕರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.ಅನುಮೋದಿತ ನಕ್ಷೆಗಳು ಮತ್ತು ವಾಸ್ತವ ಪರಿಸ್ಥಿತಿಗಳ ನಡುವಿನ ವ್ಯತ್ಯಾಸಗಳ ಕುರಿತು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರರು, ಪ್ರವಾಸೋದ್ಯಮ ಕ್ಷೇತ್ರದವರು, ಭೂಮಾಲೀಕರು, ಸ್ಥಳೀಯ ಸಂಸ್ಥೆಗಳು ಹಾಗೂ ಜಿಲ್ಲಾಡಳಿತಗಳಿಂದ ಬಂದ ಮನವಿಗಳ ಹಿನ್ನೆಲೆಯಲ್ಲಿ ಈ ಪರಿಷ್ಕರಣೆ ಕೈಗೊಳ್ಳಲಾಗುತ್ತಿದೆ.
ಕಾರವಾರ ವಿಮಾನ ನಿಲ್ದಾಣ ವಿಸ್ತರಣೆ
ಕಾರವಾರ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಯ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಯೋಜನಾ ವೆಚ್ಚವನ್ನು 98.24 ಕೋಟಿ ರೂ.ಯಿಂದ 250.05 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.ಪ್ರಸ್ತುತ 2,000 ಮೀಟರ್ ಉದ್ದದ ರನ್ವೇಯನ್ನು 3,250 ಮೀಟರ್ಗೆ ವಿಸ್ತರಿಸಲಾಗುವುದು. ಇದರಿಂದ A-320 ಮಾದರಿಯ ವಿಮಾನಗಳ ಕಾರ್ಯಾಚರಣೆಗೆ ಅನುಕೂಲವಾಗಲಿದೆ.
ಭೂಸ್ವಾಧೀನ, ಸಂತ್ರಸ್ತರ ಪುನರ್ವಸತಿ, ಸಂಪರ್ಕ ರಸ್ತೆಗಳು, ಸಿವಿಲ್ ಎನ್ಕ್ಲೇವ್ ನಿರ್ಮಾಣ ಸೇರಿದಂತೆ ಸಂಬಂಧಿತ ಕಾಮಗಾರಿಗಳು ಪರಿಷ್ಕೃತ ವೆಚ್ಚದಲ್ಲಿ ಒಳಗೊಂಡಿವೆ.
ಆರು ಪ್ರಮುಖ ಸೇತುವೆ ಯೋಜನೆಗಳಿಗೆ ಅನುಮೋದನೆ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆರು ಪ್ರಮುಖ ಸೇತುವೆ ಹಾಗೂ ಸಂಪರ್ಕ ಯೋಜನೆಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.ಮುಲ್ಕಿ ತಾಲೂಕಿನ ದಾಮಸ್ ಕಟ್ಟೆ-ಬುಳ್ಕುಂಜೆ ಪ್ರದೇಶದ ಪಾಲಿಮಾರಿನಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಸೇತುವೆ ಪುನರ್ನಿರ್ಮಾಣ.
ನೇತ್ರಾವತಿ ನದಿಗೆ ಅಡ್ಡಲಾಗಿ ಕೋಟೆಕೂರು-ಬೋಳಾರ ಸೇತುವೆಯ ಬಾಕಿ ಸಂಪರ್ಕ ಹಾಗೂ ಸಂಬಂಧಿತ ಕಾಮಗಾರಿಗಳಿಗೆ 50 ಕೋಟಿ ರೂ.
ತೀರ್ಥಹಳ್ಳಿ-ಕುಂದಾಪುರ ಮಾರ್ಗದ ರಾಜ್ಯ ಹೆದ್ದಾರಿ ೮೫ರಲ್ಲಿ ಕಂಡ್ಲೂರಿನಲ್ಲಿ ಸೇತುವೆ ನಿರ್ಮಾಣಕ್ಕೆ 55 ಕೋಟಿ ರೂ..
ಮಂಗಳೂರು-ಆತ್ರಾಡಿ ರಾಜ್ಯ ಹೆದ್ದಾರಿಯ ಮರಾವೂರು ಸೇತುವೆ ಅಭಿವೃದ್ಧಿಗೆ 40 ಕೋಟಿ ರೂ..
ಇದೇ ಹೆದ್ದಾರಿಯ ಕಟೀಲು ಸೇತುವೆಯನ್ನು 33 ಕೋಟಿ ರೂ. ವೆಚ್ಚದಲ್ಲಿ ಪುನರ್ನಿರ್ಮಾಣ. ಸೇತುವೆಯ ಅಗಲವನ್ನು 16 ಮೀಟರ್ಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ.
ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಕಾಜಲ್ ಅನ್ನು ಪೂವನಡ್ಕ ಗ್ರಾಮದೊಂದಿಗೆ ಸಂಪರ್ಕಿಸುವ ಸಿರಿ ನದಿಗೆ ಅಡ್ಡಲಾಗಿ 26 ಕೋಟಿ ರೂ. ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣ.
ಮೀನುಗಾರಿಕೆ ಸಂಪರ್ಕ ಮತ್ತು ಮೂಲಸೌಕರ್ಯ
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೀನುಗಾರಿಕೆ ಸಂಪರ್ಕ ರಸ್ತೆಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ 20 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ ಕಾಮಗಾರಿಗಳಿಗೆ ಮತ್ತೊಂದು 20 ಕೋಟಿ ರೂ. ಮಂಜೂರು ಮಾಡಲಾಗಿದೆ. ಇದರಲ್ಲಿ ಮಂಗಳೂರಿನ ಕೋಟೆಪುರದಲ್ಲಿ ಸಾಂಪ್ರದಾಯಿಕ ಮೀನುಗಾರಿಕಾ ದೋಣಿಗಳಿಗೆ ಜೆಟ್ಟಿ, ಬೆಂಗ್ರೆಯಲ್ಲಿ ಬೆರ್ಥಿಂಗ್ ಬೇಸಿನ್, ಮಂಗಳೂರು ಮೀನುಗಾರಿಕಾ ಬಂದರಿನ ಬಾಯಿಯಿಂದ ಕೋಟೆಪುರದವರೆಗೆ ಹೂಳೆತ್ತುವ ಕಾಮಗಾರಿ ಹಾಗೂ ಮಂಗಳೂರು ಮೀನುಗಾರಿಕಾ ಬಂದರು ಮತ್ತು ಕೋಟೆಪುರ ಸುತ್ತಮುತ್ತಲಿನ ನದಿ ಕಾಲುವೆಯಲ್ಲಿ ನ್ಯಾವಿಗೇಷನ್ ಬಾಯ್ಗಳ ಅಳವಡಿಕೆ ಸೇರಿವೆ.
ಎಕ್ಕೂರಿನಲ್ಲಿ ಆಧುನಿಕ ಸಗಟು ಮೀನು ಮಾರುಕಟ್ಟೆ
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಮೀನುಗಾರಿಕಾ ಕಾಲೇಜಿನ ಮೂರು ಎಕರೆ ಜಾಗದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಸಗಟು ಮೀನು ಮಾರುಕಟ್ಟೆ ನಿರ್ಮಿಸಲಾಗುವುದು.ಪ್ರಸ್ತುತ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿರುವ ದಟ್ಟಣೆಯನ್ನು ಕಡಿಮೆ ಮಾಡುವುದು ಹಾಗೂ ಸಗಟು ಮೀನು ವ್ಯಾಪಾರಕ್ಕೆ ಉತ್ತಮ ಸೌಲಭ್ಯ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ.
ವಿಶೇಷ ಸಾಗರ ವಲಯಗಳು
ಮೀನುಗಾರಿಕೆಗೆ ಸಂಬಂಧಿಸಿದ ಆರ್ಥಿಕ ಚಟುವಟಿಕೆಗಳನ್ನು ವಿಸ್ತರಿಸುವ ಉದ್ದೇಶದಿಂದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕರಾವಳಿ ಪ್ರದೇಶಗಳನ್ನು ವಿಶೇಷ ಸಾಗರ ವಲಯಗಳಾಗಿ ಅಧಿಸೂಚನೆ ಹೊರಡಿಸಲು ಸಚಿವ ಸಂಪುಟ ನಿರ್ಧರಿಸಿದೆ.ಪಂಚಾಯತ್ ರಾಜ್ ಚುನಾವಣೆ
ಪಂಚಾಯತ್ ರಾಜ್ ಸಂಸ್ಥೆಗಳ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಡಿಸೆಂಬರ್ ವೇಳೆಗೆ ಚುನಾವಣೆ ನಡೆಸಲು ಸರ್ಕಾರ ಉದ್ದೇಶಿಸಿದೆ.ಈ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಬಾಕ್ಸ್ ಬಳಸಲು ಅವಕಾಶ ಕಲ್ಪಿಸುವ ತಿದ್ದುಪಡಿಗಳ ಹಿನ್ನೆಲೆಯಲ್ಲಿ, ಬ್ಯಾಲೆಟ್ ಬಾಕ್ಸ್ಗಳ ಖರೀದಿ ಹಾಗೂ ಚುನಾವಣೆಯ ಲೈವ್ ವೆಬ್ಕಾಸ್ಟಿಂಗ್ಗಾಗಿ 151.31 ಕೋಟಿ ರೂ. ಮಂಜೂರು ಮಾಡಲಾಗಿದೆ.
ಗ್ರಾಮ ಗ್ರಂಥಾಲಯಗಳಿಗೆ ಕಂಪ್ಯೂಟರ್
ಕೇಂದ್ರ ಪ್ರಾಯೋಜಿತ 'ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು' ಯೋಜನೆಯಡಿ ಹೊಸದಾಗಿ ಸ್ಥಾಪಿಸಲಾದ ಗ್ರಾಮ ಗ್ರಂಥಾಲಯಗಳಿಗೆ 6,350 ಕಂಪ್ಯೂಟರ್ಗಳು ಮತ್ತು ಯುಪಿಎಸ್ ವ್ಯವಸ್ಥೆಗಳನ್ನು ಖರೀದಿಸಲು 57.15 ಕೋಟಿ ರೂ. ಅನುಮೋದಿಸಲಾಗಿದೆ.ಮಂಕಿ ಬಂದರು ಯೋಜನೆ
ಉತ್ತರ ಕನ್ನಡ ಜಿಲ್ಲೆಯ ಮಂಕಿ ಬಂದರಿನಲ್ಲಿ 15 MTPA ಸಾಮರ್ಥ್ಯದ ಬಹುಉದ್ದೇಶದ ಬಂದರು ಮತ್ತು ಹಡಗು ನಿರ್ಮಾಣ ಕೇಂದ್ರ ಅಭಿವೃದ್ಧಿಪಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.PPP ಮಾದರಿಯಲ್ಲಿ DBFOT ಆಧಾರದ ಮೇಲೆ ಜಾರಿಗೊಳ್ಳಲಿರುವ ಯೋಜನೆಯ ಅಂದಾಜು ವೆಚ್ಚ 6,925 ಕೋಟಿ ರೂ.
ಯೋಜನೆಯಿಂದ ಸುಮಾರು 2,902.69 ಕೋಟಿ ರೂ. ಖಚಿತ ಆದಾಯ ದೊರೆಯುವ ನಿರೀಕ್ಷೆಯಿದ್ದು, ರಾಜ್ಯದ ಆರ್ಥಿಕತೆಗೆ ಅಂದಾಜು 28,000 ಕೋಟಿ ರೂ. ಕೊಡುಗೆ ನೀಡುವ ಸಾಧ್ಯತೆಯಿದೆ. ಸುಮಾರು 44,800 ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ಗಂಗೊಳ್ಳಿಯಲ್ಲಿ ಗ್ರೀನ್ಫೀಲ್ಡ್ ಹಡಗು ನಿರ್ಮಾಣ ಘಟಕ
ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ 322 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಗ್ರೀನ್ಫೀಲ್ಡ್ ಹಡಗು ನಿರ್ಮಾಣ ಘಟಕ ಅಭಿವೃದ್ಧಿಪಡಿಸಲಾಗುವುದು.PPP ಮಾದರಿಯಲ್ಲಿ DBFOT ಆಧಾರದ ಮೇಲೆ ಯೋಜನೆಯನ್ನು ಜಾರಿಗೊಳಿಸಲಾಗುವುದು.
ಕರಾವಳಿ ಪ್ರಯಾಣಿಕರ ದೋಣಿ ಸೇವೆ
ಕರಾವಳಿ ಪ್ರದೇಶದ ಪ್ರಮುಖ ಕೇಂದ್ರಗಳ ನಡುವಿನ ಸಂಪರ್ಕವನ್ನು ಬಲಪಡಿಸುವ ಉದ್ದೇಶದಿಂದ ಕರಾವಳಿ ಪ್ರಯಾಣಿಕರ ಫೆರ್ರಿ ಸೇವೆ ಆರಂಭಿಸುವ ಸಾಧ್ಯತೆ ಕುರಿತು ಅಧ್ಯಯನ ನಡೆಸಲು ಹಾಗೂ ಪಿಪಿಪಿ ಮಾದರಿ ರೂಪಿಸಲು ಟ್ರಾನ್ಸಾಕ್ಷನ್ ಅಡ್ವೈಸರ್ ನೇಮಕಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.ಅರಣ್ಯ ನೇಮಕಾತಿಯಲ್ಲಿ ಸ್ಥಳೀಯ ಬುಡಕಟ್ಟು ಸಮುದಾಯಗಳಿಗೆ ಅವಕಾಶ
ಕರ್ನಾಟಕ ಅರಣ್ಯ ಇಲಾಖೆ ಸೇವೆಗಳ ನೇಮಕಾತಿ ನಿಯಮಗಳು, 2026ಕ್ಕೆ ತಿದ್ದುಪಡಿ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಪರಿಶಿಷ್ಟ ಪಂಗಡಗಳ ಸ್ಥಳೀಯ ಸಮುದಾಯಗಳಿಗೆ ಅರಣ್ಯ ರಕ್ಷಕ ಮತ್ತು ಅರಣ್ಯ ವೀಕ್ಷಕ ಹುದ್ದೆಗಳ ನೇರ ನೇಮಕಾತಿಯಲ್ಲಿ ಹೆಚ್ಚುವರಿ ಪ್ರಾತಿನಿಧ್ಯ ಕಲ್ಪಿಸುವುದು ತಿದ್ದುಪಡಿಯ ಉದ್ದೇಶವಾಗಿದೆ.
ಹಸಲಾರು, ಸಿದ್ದಿ, ಕುಡಿಯ, ಬೆಟ್ಟಕುರುಬ ಮತ್ತು ಪಣಿಯ ಸೇರಿದಂತೆ ನಿರ್ದಿಷ್ಟ ಅರಣ್ಯವಾಸಿ ಬುಡಕಟ್ಟು ಸಮುದಾಯಗಳು ಇದರ ವ್ಯಾಪ್ತಿಗೆ ಬರಲಿವೆ.
ಹೊಸದಾಗಿ ರಚಿಸಲಾದ ಕನಕಪುರ ವನ್ಯಜೀವಿ ವಿಭಾಗವನ್ನೂ ಈಗಾಗಲೇ ಇರುವ ವನ್ಯಜೀವಿ ವಿಭಾಗಗಳ ಪಟ್ಟಿಗೆ ಸೇರಿಸಲಾಗುವುದು.
ರಾಜ್ಯದಲ್ಲಿ 1,000 ಕರ್ನಾಟಕ ಪಬ್ಲಿಕ್ ಶಾಲೆಗಳ ಅಭಿವೃದ್ಧಿ
ರಾಜ್ಯಾದ್ಯಂತ 1,000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಸಿದ್ಧತೆ ನಡೆಸಿದೆ.ಇದರಲ್ಲಿ ಕರಾವಳಿ ಭಾಗದ 49 ಶಾಲೆಗಳು ಸೇರಿವೆ. ದಕ್ಷಿಣ ಕನ್ನಡದಲ್ಲಿ 20, ಉಡುಪಿಯಲ್ಲಿ 12 ಹಾಗೂ ಉತ್ತರ ಕನ್ನಡದಲ್ಲಿ 17 ಶಾಲೆಗಳನ್ನು ಒಟ್ಟು 245 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.
ಈ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ವಿಶೇಷ ಅಧಿಕಾರ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ವೆನ್ಲಾಕ್ ಜಿಲ್ಲಾಸ್ಪತ್ರೆ ವಿಸ್ತರಣೆ
ಮಂಗಳೂರಿನ ಸರ್ಕಾರಿ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಮೊದಲ ಹಂತದಲ್ಲಿ 200 ಹಾಸಿಗೆಗಳನ್ನು ಹೆಚ್ಚಿಸಲಾಗುವುದು. ಇದಕ್ಕೆ ಅಗತ್ಯವಿರುವ ಸಿಬ್ಬಂದಿ ಹಾಗೂ ವೈದ್ಯಕೀಯ ಉಪಕರಣಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು.ಕಾಪುಗೆ ಕುಡಿಯುವ ನೀರು
ಉದ್ಯಾವರ ನದಿಯಿಂದ ಕಾಪು ತಾಲೂಕಿನ ಏಳು ಗ್ರಾಮಗಳಿಗೆ 19.06 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಪ್ರಮಾಣದ ಕುಡಿಯುವ ನೀರು ಪೂರೈಕೆ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.ಕಾಪು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳನ್ನು ಒಳಗೊಂಡ ವಿಸ್ತೃತ ಕುಡಿಯುವ ನೀರಿನ ಯೋಜನೆಗೆ ಪರಿಷ್ಕೃತ ಅಂದಾಜು 62.31 ಕೋಟಿ ರೂ.ಗೂ ಅನುಮೋದನೆ ನೀಡಲಾಗಿದೆ.
ಮಂಗಳೂರು ಮತ್ತು ಉಡುಪಿ ಕ್ರೀಡಾಂಗಣಗಳ ಅಭಿವೃದ್ಧಿ
ಮಂಗಳೂರಿನ ಮಂಗಳಾ ಕ್ರೀಡಾಂಗಣವನ್ನು 20 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಸೌಲಭ್ಯವಾಗಿ ಅಭಿವೃದ್ಧಿಪಡಿಸಲಾಗುವುದು.ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಲು 10 ಕೋಟಿ ರೂ. ಮಂಜೂರು ಮಾಡಲಾಗಿದೆ.
ಕರ್ನಾಟಕ ಸಾಗರ ಜೈವಿಕ ತಂತ್ರಜ್ಞಾನ ನೀತಿ
ಕರ್ನಾಟಕ ಸಾಗರ ಜೈವಿಕ ತಂತ್ರಜ್ಞಾನ ನೀತಿ 2026-31ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.ಈ ನೀತಿಯಡಿ ಸರ್ಕಾರಿ ಮೀನುಗಾರಿಕಾ ಕಾಲೇಜಿನಲ್ಲಿ ಕರ್ನಾಟಕ ಸಾಗರ ಜೈವಿಕ ತಂತ್ರಜ್ಞಾನ ಮತ್ತು ಬ್ಲೂ ಎಕಾನಮಿ ಸಂಸ್ಥೆ ಸ್ಥಾಪಿಸಲಾಗುವುದು. ಉಡುಪಿಯಲ್ಲಿ ಪ್ರಯೋಗಾಲಯಗಳು, ಬಯೋಬ್ಯಾಂಕ್ ಹಾಗೂ ಇನ್ಕ್ಯುಬೇಷನ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
ಐದು ವರ್ಷಗಳಲ್ಲಿ ಅಂದಾಜು 30 ಕೋಟಿ ರೂ. ಹೂಡಿಕೆ ಮಾಡುವ ಉದ್ದೇಶ ಹೊಂದಿರುವ ನೀತಿಯಡಿ, ಸಾಗರ ಜೈವಿಕ ತಂತ್ರಜ್ಞಾನ ವಲಯಗಳಿಗೆ 10 ಕೋಟಿ ರೂ., ಸಮುದ್ರ ಸಸ್ಯಗಳಿಂದ ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆಗೆ 45 ಕೋಟಿ ರೂ. ಪ್ರೋತ್ಸಾಹಧನ ಹಾಗೂ ಕರ್ನಾಟಕ ಪೈಲಟ್ ಬ್ಲೂ ಕಾರ್ಬನ್ ಪ್ರಮಾಣೀಕರಣ ಕಾರ್ಯಕ್ರಮಕ್ಕೆ 5 ಕೋಟಿ ರೂ. ಒದಗಿಸಲಾಗುವುದು.
ಕರ್ನಾಟಕ ಸುಸ್ಥಿರ ಡೇಟಾ ಸೆಂಟರ್ ನೀತಿ
ಕರ್ನಾಟಕ ಸುಸ್ಥಿರ ಡೇಟಾ ಸೆಂಟರ್ ನೀತಿ 2026-31ಕ್ಕೂ ಸಚಿವ ಸಂಪುಟ ಅನುಮೋದನೆ ನೀಡಿದೆ.ಡೇಟಾ ಸೆಂಟರ್ ಘಟಕಗಳು, ಡೇಟಾ ಸೆಂಟರ್ ಪಾರ್ಕ್ ಅಭಿವೃದ್ಧಿಪಡಿಸುವವರು ಮತ್ತು ನಿರ್ವಾಹಕರು, ಕೇಬಲ್ ಲ್ಯಾಂಡಿಂಗ್ ಸ್ಟೇಷನ್ಗಳು, ಜಲಾಂತರ್ಗಾಮಿ ಕೇಬಲ್ ನಿರ್ವಾಹಕರು ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ಈ ನೀತಿ ಬೆಂಬಲ ನೀಡಲಿದೆ.
ಕಾರ್ಕಳದಲ್ಲಿ ಕುಶಲಕರ್ಮಿಗಳ ಕ್ಲಸ್ಟರ್
ಕೇಂದ್ರ ಸರ್ಕಾರದ ಎಂಎಸ್ಇ-ಸಿಡಿಪಿ ಯೋಜನೆಯಡಿ ಕಾರ್ಕಳ ತಾಲೂಕಿನಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಶಿಲ್ಪ/ಕುಶಲಕರ್ಮಿಗಳ ಕ್ಲಸ್ಟರ್ ಸ್ಥಾಪಿಸಲಾಗುವುದು.ಯೋಜನಾ ವೆಚ್ಚದಲ್ಲಿ 14 ಕೋಟಿ ರೂ. ಕೇಂದ್ರ ಸರ್ಕಾರದಿಂದ, 3 ಕೋಟಿ ರೂ. ರಾಜ್ಯ ಸರ್ಕಾರದಿಂದ ಹಾಗೂ 3 ಕೋಟಿ ರೂ. ವಿಶೇಷ ಉದ್ದೇಶ ಘಟಕದ ಮೂಲಕ ಬರಲಿದೆ.
ಹೊಸ ಕೇಂದ್ರ ಕಾರಾಗೃಹದ ಗಡಿ ಗೋಡೆ
ಮಂಗಳೂರಿನಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಕೇಂದ್ರ ಕಾರಾಗೃಹದ ಮುಖ್ಯ ಗಡಿ ಗೋಡೆ ನಿರ್ಮಾಣಕ್ಕೆ 10 ಕೋಟಿ ರೂ. ಒದಗಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.ಮಂಗಳೂರು ವಾಟರ್ ಮೆಟ್ರೋ
ಗುರುಪುರ ಮತ್ತು ನೇತ್ರಾವತಿ ನದಿಗಳಲ್ಲಿ ಪಿಪಿಪಿ ಮಾದರಿಯಲ್ಲಿ ಮಂಗಳೂರು ವಾಟರ್ ಮೆಟ್ರೋ ಯೋಜನೆ ಜಾರಿಗೊಳಿಸುವ ತಾಂತ್ರಿಕ ಮತ್ತು ಆರ್ಥಿಕ ಸಾಧ್ಯತೆಗಳನ್ನು ಪರಿಶೀಲಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ.ಯೋಜನೆಯನ್ನು ಮುಂದುವರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅಧಿಕಾರವನ್ನು ಕರ್ನಾಟಕ ಜಲಸಾರಿಗೆ ಮಂಡಳಿಗೆ ನೀಡಲಾಗಿದೆ.
ಪಿಲಿಕುಳ ನಿಸರ್ಗಧಾಮ
ಪಿಲಿಕುಳ ನಿಸರ್ಗಧಾಮವನ್ನು ಮತ್ತಷ್ಟು ಆಕರ್ಷಕವಾಗಿಸುವ ಉದ್ದೇಶದಿಂದ ಅಸ್ತಿತ್ವದಲ್ಲಿರುವ 356.20 ಎಕರೆ ಗುತ್ತಿಗೆಯನ್ನು ರದ್ದುಪಡಿಸಿ, ಸುಮಾರು 339.90 ಎಕರೆ ಜಮೀನನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಹಸ್ತಾಂತರಿಸಲು ಸಚಿವ ಸಂಪುಟ ನಿರ್ಧರಿಸಿದೆ.ಒಳಚರಂಡಿ ಕಾಮಗಾರಿಗಳಿಗೆ 100 ರೂ. ಕೋಟಿ
ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ನೆರವಿನ ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣೆ ಮತ್ತು ಹೂಡಿಕೆ ಕಾರ್ಯಕ್ರಮದಡಿ, ಮಂಗಳೂರು ವಲಯ-3 ಹಾಗೂ ಸುರತ್ಕಲ್ ಪ್ರದೇಶದ ಹಳೆಯ ಭೂಗತ ಒಳಚರಂಡಿ ವ್ಯವಸ್ಥೆಯ ಪುನಶ್ಚೇತನಕ್ಕೆ 100 ಕೋಟಿ ರೂ. ಅನುಮೋದಿಸಲಾಗಿದೆ.ಮಂಗಳೂರು ರಸ್ತೆಗಳ ಅಭಿವೃದ್ಧಿಗೆ 400 ಕೋಟಿ ರೂ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹದಗೆಟ್ಟ ರಸ್ತೆಗಳನ್ನು ಸಿಮೆಂಟ್-ಕಾಂಕ್ರೀಟ್ ರಸ್ತೆಗಳಾಗಿ ಪರಿವರ್ತಿಸಲು ಹಾಗೂ ಸಮಗ್ರ ರಸ್ತೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು 400 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಲಾಗಿದೆ.ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸಲಾಗುವುದು.
ವಿಟ್ಲಕ್ಕೆ ಕುಡಿಯುವ ನೀರು
ವಿಟ್ಲ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮತ್ತು ವಿತರಣೆಗೆ 94 ಕೋಟಿ ರೂ. ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಐದು ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯೂ ಸೇರಿದೆ.ವಿವಿಧ ಸಂಸ್ಥೆಗಳಿಗೆ ಭೂಮಿ ಮಂಜೂರು
ವಿವಿಧ ಸಂಸ್ಥೆಗಳಿಗೆ ಭೂಮಿ ಮಂಜೂರು ಮಾಡುವ ಪ್ರಸ್ತಾವನೆಗಳಿಗೂ ಸಚಿವ ಸಂಪುಟ ಅನುಮೋದನೆ ನೀಡಿದೆ.
*ಸೇಂಟ್ ಲಾರೆನ್ಸ್ ಚರ್ಚ್, ಅತ್ತೂರು: ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ 7.30 ಎಕರೆ.
*ಶ್ರೀ ನಾರಾಯಣ ಧರ್ಮ ಸಂಘಂ ಟ್ರಸ್ಟ್, ಶಿವಗಿರಿ ಮಠ: ಗುರುಧರ್ಮ ಪ್ರಚಾರಣಾ ಸಭೆಗಾಗಿ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದಲ್ಲಿ 6.51 ಎಕರೆ.
*ಶ್ರೀ ಗುರುಬ್ರಹ್ಮ ಮುಗ್ಗೆರ್ಕಳ ದೇವಸ್ಥಾನ, ಪಡುಬೆಳ್ಳೆ: ಕಾಪು ತಾಲೂಕಿನ ಬೆಳ್ಳೆ ಗ್ರಾಮದಲ್ಲಿ 29 ಸೆಂಟ್ಸ್.
*ಕರಾವಳಿ ಲೇಖಕಿಯರ-ವಾಚಕಿಯರ ಸಂಘ: 0.05 ಎಕರೆ ಜಮೀನು.ಮಂಗಳೂರಿನಲ್ಲಿ ನಡೆದ ರಾಜ್ಯದ ಮೊದಲ ಸಚಿವ ಸಂಪುಟ ಸಭೆಯ ಬಳಿಕ ಘೋಷಿಸಲಾದ ಕರಾವಳಿ ಮತ್ತು ಮಲೆನಾಡು ಅಭಿವೃದ್ಧಿಯ ಸಮಗ್ರ ಕಾರ್ಯಕ್ರಮದ ಭಾಗವಾಗಿ ಈ ಎಲ್ಲ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.