ಬಂಟ್ವಾಳ, ಸೆ.20 (DaijiworldNews/TA): ಜಕ್ರಿಬೆಟ್ಟಿನಲ್ಲಿ ಸೆ.14ರಿಂದ ಐದು ದಿನಗಳ ಕಾಲ ನಡೆದ 23ನೇ ವರ್ಷದ ಶ್ರೀ ಗಣೇಶೋತ್ಸವವು ವೈಭವದ ವಿಸರ್ಜನಾ ಶೋಭಾಯಾತ್ರೆಯೊಂದಿಗೆ ಸಮಾಪ್ತಿಗೊಂಡಿತು.

ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಜಕ್ರಿಬೆಟ್ಟು, ಬಂಟ್ವಾಳ ಇದರ ನೇತೃತ್ವದಲ್ಲಿ ನಡೆದ ಗಣೇಶೋತ್ಸವವು ಮಾಜಿ ಸಚಿವ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ಸರ್ವಧರ್ಮೀಯರನ್ನು ಒಗ್ಗೂಡಿಸುವ ‘ಬಂಟ್ವಾಳದ ಹಬ್ಬ’ವಾಗಿ ಗಮನ ಸೆಳೆಯಿತು. ಸೆ.14ರಂದು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗಣೇಶ ವಿಗ್ರಹ ಪ್ರತಿಷ್ಠಾಪನೆ ನೆರವೇರಿಸಲಾಗಿತ್ತು. ಬಳಿಕ ಐದು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸೆ.18ರಂದು ಸಂಜೆ ಸಂಧ್ಯಾಪೂಜೆ, ವಿಸರ್ಜನಾ ಪೂಜೆ ಹಾಗೂ ಪ್ರಾರ್ಥನೆ ನೆರವೇರಿದ ಬಳಿಕ ಗಣೇಶ ವಿಗ್ರಹದ ವೈಭವದ ಶೋಭಾಯಾತ್ರೆ ನಡೆಯಿತು.
ಅಲಂಕೃತ ವಾಹನದಲ್ಲಿ ಗಣೇಶ ವಿಗ್ರಹವನ್ನು ಇರಿಸಿ ಭಕ್ತರ ಸಮ್ಮುಖದಲ್ಲಿ ಶೋಭಾಯಾತ್ರೆ ಸಾಗಿತು. ಭಕ್ತರು ಭಜನೆ, ಘೋಷಣೆ ಹಾಗೂ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಪಾಲ್ಗೊಂಡರು. ಬಳಿಕ ಸಂಪ್ರದಾಯಬದ್ಧವಾಗಿ ಗಣೇಶ ವಿಗ್ರಹದ ವಿಸರ್ಜನಾ ಕಾರ್ಯಕ್ರಮ ನೆರವೇರಿತು. ಸಮಿತಿ ಅಧ್ಯಕ್ಷ ಬಿ. ಪದ್ಮಶೇಖರ ಜೈನ್, ಉಪಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಸೇರಿದಂತೆ ಸಮಿತಿ ಸದಸ್ಯರು, ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರು, ಊರಿನ ಗಣ್ಯರು ಮತ್ತು ಭಕ್ತರು ಉಪಸ್ಥಿತರಿದ್ದರು.