ಬೆಳ್ತಂಗಡಿ, ಸೆ.20 (DaijiworldNews/TA): ಶಿಶಿಲ ಗ್ರಾಮದ ಗುಂಡಿಕಂಡ ಎಂಬಲ್ಲಿ ಕೃಷಿ ಹೊಂಡವೊಂದರಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ಮಹಿಳೆಯ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿರುವ ಘಟನೆ ನಡೆದಿದೆ.

ಮೃತರನ್ನು ಕಡಬ ತಾಲೂಕಿನ ಸಿರಿಬಾಗಿಲು ಗ್ರಾಮದ ಚಿನ್ನಮ್ಮ ಅಲಿಯಾಸ್ ಚಿತ್ರಾವತಿ (46) ಎಂದು ಗುರುತಿಸಲಾಗಿದೆ. ಸುಮಾರು 20 ವರ್ಷಗಳ ಹಿಂದೆ ತನಿಯಪ್ಪ ಗೌಡ ಎಂಬುವರನ್ನು ವಿವಾಹವಾಗಿದ್ದ ಅವರು, ಇಬ್ಬರು ಮಕ್ಕಳನ್ನು ಹೊಂದಿದ್ದರು. ಸೆಪ್ಟೆಂಬರ್ 16ರ ರಾತ್ರಿ ಗುಂಡಿಕಂಡದಲ್ಲಿರುವ ನೆರೆಮನೆಯ ಕುಶಾಲಪ್ಪ ಗೌಡ ಅವರಿಗೆ ಸೇರಿದ ಕೃಷಿ ಹೊಂಡದಲ್ಲಿ ಚಿನ್ನಮ್ಮ ಅವರ ಶವ ಪತ್ತೆಯಾಗಿದೆ.
ಆರಂಭದಲ್ಲಿ ಅವರು ಖಿನ್ನತೆಯಿಂದಾಗಿ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮೃತರ ಸಹೋದರ ಗಂಗಾಧರ ಗೌಡ, ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆಯ ಸಾವಿಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.