ಕುಂದಾಪುರ, ಸೆ.23 (DaijiworldNews/AA): ಕುಂದಾಪುರ ಸಮೀಪದ ಕೋಟೇಶ್ವರದ ಕೋಟಿ ತೀರ್ಥ ಪುಷ್ಕರಣಿಗೆ ಹಾರಿ 37 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಬುಧವಾರ ಬೆಳಗ್ಗೆ ನೀರಿನಿಂದ ಮೃತದೇಹವನ್ನು ಹೊರತೆಗೆಯಲಾಗಿದೆ.

ಮೃತರನ್ನು ಕೋಟೇಶ್ವರ ಸಮೀಪದ ಹೊದ್ರಾಳಿ ಕೊಳನಕಟ್ಟೆ ನಿವಾಸಿ ಮಹಾಬಲ ಆಚಾರ್ಯ ಅವರ ಪುತ್ರ ಪದ್ಮನಾಭ ಆಚಾರ್ಯ ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ, ಕುಂದಾಪುರದ ಟೈಲ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಪದ್ಮನಾಭ ಅವರು ಕಳೆದ ನಾಲ್ಕು ತಿಂಗಳಿಂದ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಅವರು ಮಂಗಳವಾರ ಬೆಳಗ್ಗೆ ಮನೆಯಿಂದ ತೆರಳಿದ್ದು ರಾತ್ರಿಯಾದರೂ ವಾಪಸ್ ಬಂದಿರಲಿಲ್ಲ. ನಂತರ ಅವರ ದ್ವಿಚಕ್ರ ವಾಹನವು ದೇವಸ್ಥಾನದ ಬಳಿ ನಿಂತಿರುವುದು ಪತ್ತೆಯಾಗಿದೆ. ಕುಟುಂಬದವರು ಹುಡುಕಾಟ ನಡೆಸಿದರೂ ಅವರ ಸುಳಿವು ಸಿಕ್ಕಿರಲಿಲ್ಲ.
ಕೋಟಿ ತೀರ್ಥ ಕೊಳದ ಪೂರ್ವದ ಮೆಟ್ಟಿಲುಗಳ ಮೇಲೆ ಅವರ ಚಪ್ಪಲಿ ಮತ್ತು ಟೋಪಿ ಪತ್ತೆಯಾದಾಗ ಅವರು ನೀರಿನಲ್ಲಿ ಹಾರಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಬುಧವಾರ ಬೆಳಗ್ಗೆ ಶೋಧ ಕಾರ್ಯ ಆರಂಭಿಸಲಾಯಿತು.
ನಿತ್ಯ ಕೆರೆಯಲ್ಲಿ ಈಜಲು ಬರುವ ಮಾರ್ಕೋಡು ಸುಧೀರ್ ಕುಮಾರ್ ಶೆಟ್ಟಿ, ಪ್ರಭಾಕರ ಶೆಟ್ಟಿ ಮತ್ತು ಸತ್ಯನಾರಾಯಣ ಮಂಜ ಸೇರಿದಂತೆ ಸ್ಥಳೀಯರು ಬೋಟ್ ಮೂಲಕ ಹುಡುಕಾಟ ನಡೆಸಿ ಬೆಳಗ್ಗೆ 9 ಗಂಟೆ ಸುಮಾರಿಗೆ ನೀರಿನಲ್ಲಿ ಮೃತದೇಹವನ್ನು ಪತ್ತೆ ಹಚ್ಚಿದರು. ಬಳಿಕ ಮುಳುಗುತಜ್ಞ ಈಶ್ವರ್ ಮಲ್ಪೆ ಮತ್ತು ಅವರ ತಂಡ ಸ್ಥಳಕ್ಕೆ ಆಗಮಿಸಿ, ಸ್ಥಳೀಯ ಈಜುಗಾರರ ಸಹಾಯದಿಂದ ಕೊಳದಿಂದ ಮೃತದೇಹವನ್ನು ಹೊರತೆಗೆದರು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಕುಂದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯಾವುದೇ ಸಮಸ್ಯೆಗೂ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ರೀತಿಯ ಮಾನಸಿಕ ಒತ್ತಡದಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯವನ್ನು ಪಡೆಯಿರಿ. ಉಚಿತ ಸಹಾಯವಾಣಿ ಸಂಖ್ಯೆ 9152987821 ಗೆ ಕರೆ ಮಾಡಿ.