ಉಡುಪಿ, ಸೆ.23 (DaijiworldNews/AA): ಉತ್ಪಾದನಾ ದೋಷವಿರುವ ಎಲೆಕ್ಟ್ರಿಕ್ ಸ್ಕೂಟರ್ ಪೂರೈಸಿ, ಸೇವೆಯಲ್ಲಿ ಲೋಪ ಎಸಗಿದ್ದಕ್ಕಾಗಿ ಗ್ರಾಹಕನಿಗೆ ಪರಿಹಾರ ನೀಡುವಂತೆ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಚೇತಕ್ ಬಜಾಜ್ ಆಟೋ ಕಂಪನಿಗೆ ನಿರ್ದೇಶನ ನೀಡಿದೆ.

ಕಾಪು ತಾಲೂಕಿನ ಕಟಪಾಡಿ ಸಮೀಪದ ಮಣಿಪುರದ ರಿತೇಶ್ ಎಸ್. ಸುವರ್ಣ ಎಂಬವರು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ದರು. ವಾಹನ ಖರೀದಿಸಿದ ಕೆಲವೇ ದಿನಗಳಲ್ಲಿ ಅದರ ಬ್ಯಾಟರಿಯಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಕಂಪನಿಯ ಅಧಿಕೃತ ಸೇವಾ ಕೇಂದ್ರದಲ್ಲಿ ಸ್ಕೂಟರ್ ಸರ್ವೀಸ್ ಮಾಡಿಸಲಾಗಿದ್ದು, ಮೊದಲ ಮೂರು ಸರ್ವೀಸ್ಗಳಲ್ಲೇ ಎರಡು ಬಾರಿ ಬ್ಯಾಟರಿಯನ್ನು ಬದಲಾಯಿಸಲಾಗಿತ್ತು.
ಆದಾಗ್ಯೂ, ಮೂರನೇ ಬಾರಿಯೂ ಬ್ಯಾಟರಿಯಲ್ಲಿ ಮತ್ತೆ ದೋಷ ಕಾಣಿಸಿಕೊಂಡಿದ್ದು, ಗ್ರಾಹಕರಿಗೆ ತೀವ್ರ ತೊಂದರೆ ಮತ್ತು ನಷ್ಟ ಉಂಟಾಗಿತ್ತು. ಈ ಕುರಿತು ಕಂಪನಿಗೆ ಕಾನೂನು ನೋಟಿಸ್ ನೀಡಿದ್ದರೂ ಯಾವುದೇ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ. ಇದರಿಂದಾಗಿ ರಿತೇಶ್ ಎಸ್. ಸುವರ್ಣ ಅವರು ನ್ಯಾಯಕ್ಕಾಗಿ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಸಂಪರ್ಕಿಸಿದರು.
ದೂರು, ಕಂಪನಿ ಸಲ್ಲಿಸಿದ ಆಕ್ಷೇಪಣೆಗಳು ಹಾಗೂ ವಾಹನದ ಸರ್ವೀಸ್ ದಾಖಲೆಗಳನ್ನು ಪರಿಶೀಲಿಸಿದ ಆಯೋಗವು, ಎರಡು ಬಾರಿ ಬ್ಯಾಟರಿ ಬದಲಾಯಿಸಿದರೂ ಮರುಕಳಿಸುತ್ತಿದ್ದ ದೋಷವನ್ನು ಸರಿಪಡಿಸಲು ಕಂಪನಿ ವಿಫಲವಾಗಿದೆ ಎಂದು ಗಮನಿಸಿತು. ಪದೇ ಪದೇ ಬ್ಯಾಟರಿ ಕೈಕೊಟ್ಟಿರುವುದು ಎಲೆಕ್ಟ್ರಿಕ್ ವಾಹನದ ತಯಾರಿಕಾ ದೋಷ ಹಾಗೂ ಸೇವೆಯ ಲೋಪವನ್ನು ಎತ್ತಿಹಿಡಿಯುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಆಯೋಗದ ಅಧ್ಯಕ್ಷ ಸುನಿಲ್ ಟಿ. ಮಸರೆಡ್ಡಿ ಹಾಗೂ ಸದಸ್ಯೆ ಸುಜಾತಾ ಬಿ. ಕೊರಳ್ಳಿ ಅವರನ್ನೊಳಗೊಂಡ ಪೀಠವು, ಆದೇಶ ತಲುಪಿದ 30 ದಿನಗಳೊಳಗೆ ವಾಹನದ ಖರೀದಿ ಬೆಲೆ 1,21,750 ರೂ. ಅನ್ನು ಶೇ. 9 ರಷ್ಟು ಬಡ್ಡಿಯೊಂದಿಗೆ ಹಿಂತಿರುಗಿಸಲು ಮತ್ತು ಇತರೆ ವೆಚ್ಚಗಳಿಗಾಗಿ 15,000 ರೂ. ಪಾವತಿಸುವಂತೆ ಕಂಪನಿಗೆ ಆದೇಶಿಸಿದೆ.
ಈ ಆದೇಶವನ್ನು ಆಗಸ್ಟ್ 5 ರಂದು ಹೊರಡಿಸಲಾಗಿದೆ.
ಗ್ರಾಹಕರ ಪರವಾಗಿ ವಕೀಲರಾದ ವಿವೇಕಾನಂದ ಮಲ್ಯ ಮತ್ತು ಪ್ರವೀಣ್ ಪೂಜಾರಿ ವಾದ ಮಂಡಿಸಿದ್ದರು.