ಬೆಳ್ತಂಗಡಿ, ಸೆ.23 (DaijiworldNews/AA): ಪತ್ನಿಯ ಮೃತದೇಹ ತೋಟದ ಕೆರೆಯಲ್ಲಿ ನಿಗೂಢ ರೀತಿಯಲ್ಲಿ ಪತ್ತೆಯಾದ ಬೆನ್ನಲ್ಲೇ ಆಕೆಯ ಪತಿಯೂ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದಲ್ಲಿ ಸಂಭವಿಸಿದೆ.

ಗುಂಡಿಕ್ಕಾಡು ನಿವಾಸಿ ತನಿಯಪ್ಪ ಗೌಡ ಆತ್ಮಹತ್ಯೆಗೆ ಶರಣಾದವರು.
ತನಿಯಪ್ಪ ಗೌಡ ಅವರು ಕಳೆದ ಎರಡು ಮೂರು ದಿನಗಳಿಂದ ಯಾರಿಗೂ ಕಾಣಿಸಿಕೊಳ್ಳದೆ ನಾಪತ್ತೆಯಾಗಿದ್ದರು. ಇದರಿಂದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ತೀವ್ರ ಶೋಧ ಕಾರ್ಯ ನಡೆಸಿದಾಗ, ಅವರು ತಮ್ಮ ನಿವಾಸದೊಳಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಕೆಲವೇ ದಿನಗಳ ಹಿಂದಷ್ಟೇ ಇವರ ಪತ್ನಿ ಚಿನ್ನಮ್ಮ ಅವರ ಮೃತದೇಹ ಪಕ್ಕದ ಜಮೀನಿನ ಕೆರೆಯಲ್ಲಿ ಪತ್ತೆಯಾಗಿತ್ತು. ಅವರ ಅಕಾಲಿಕ ಸಾವು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಅವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಚಿನ್ನಮ್ಮ ಅವರ ಸಹೋದರ ಗಂಗಾಧರ ಗೌಡ ಅವರು, 'ಸಾವಿನ ಬಗ್ಗೆ ಅನುಮಾನವಿದೆ" ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಪತಿ ತನಿಯಪ್ಪ ಗೌಡ ಅವರ ಮೃತದೇಹವೂ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿರುವುದರಿಂದ, ಸ್ಥಳೀಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ದಂಪತಿ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಸಮಗ್ರ ತನಿಖೆ ಕೈಗೊಂಡಿದ್ದಾರೆ.
ಯಾವುದೇ ಸಮಸ್ಯೆಗೂ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ರೀತಿಯ ಮಾನಸಿಕ ಒತ್ತಡದಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯವನ್ನು ಪಡೆಯಿರಿ. ಉಚಿತ ಸಹಾಯವಾಣಿ ಸಂಖ್ಯೆ 9152987821 ಗೆ ಕರೆ ಮಾಡಿ.