ಮಂಗಳೂರು, ಅ.09 (DaijiworldNews/AA): ಪ್ರಸ್ತುತ ಮೀನುಗಾರಿಕೆ ಋತು ಆರಂಭವಾಗಿ ಎರಡು ತಿಂಗಳು ಕಳೆದಿದ್ದು, ಪ್ರತಿಕೂಲ ಹವಾಮಾನದ ಆತಂಕದ ನಡುವೆಯೂ ಈ ಅವಧಿಯಲ್ಲಿ ಮೀನುಗಾರಿಕೆ ತೃಪ್ತಿದಾಯಕವಾಗಿದೆ ಎಂದು ಮೀನುಗಾರರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಎರಡು ತಿಂಗಳ ಮೀನುಗಾರಿಕಾ ನಿಷೇಧದ ನಂತರ ಕಡಲಿಗೆ ಇಳಿಯುವ ಮೀನುಗಾರರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ನಿಷೇಧಾವಧಿ ಮುಗಿದ ಬಳಿಕ ಬಹುತೇಕ ಎಲ್ಲಾ ಬೋಟ್ಗಳು ತಮ್ಮ ಮೊದಲ ಮೀನುಗಾರಿಕಾ ಪ್ರವಾಸ ಕೈಗೊಳ್ಳುತ್ತವೆ. ಈ ಋತುವಿನಲ್ಲಿ ಆಳ ಸಮುದ್ರಕ್ಕೆ ತೆರಳಿದ ಎಲ್ಲಾ ಬೋಟ್ಗಳಿಗೂ ಉತ್ತಮ ಇಳುವರಿ ದೊರೆತಿದೆ. ಮುಂದಿನ ಎರಡರಿಂದ ಮೂರು ತಿಂಗಳುಗಳ ಕಾಲವೂ ಇದೇ ರೀತಿ ಮುಂದುವರಿದರೆ, ಇದು ಉತ್ತಮ ಮೀನುಗಾರಿಕಾ ಋತುವಾಗಲಿದೆ ಎಂದು ಮೀನುಗಾರರು ಅಭಿಪ್ರಾಯಪಟ್ಟಿದ್ದಾರೆ.
ಪರ್ಸಿನ್ ಬೋಟ್ಗಳಿಗೆ ಬೂತಾಯಿ ಮತ್ತು ಬಂಗುಡೆ ಸಿಗುತ್ತಿದ್ದರೆ, ಟ್ರಾಲ್ ಬೋಟ್ಗಳಿಗೆ ಕಪ್ಪೆ ಬೊಂಡಾಸ್, ಡಿಸ್ಕೋ, ಮುರು ಮತ್ತು ಪಾಂಬೋಲ್ನಂತಹ ಮೀನುಗಳು ಲಭ್ಯವಾಗುತ್ತಿವೆ. ಇನ್ನು ಸಣ್ಣ ದೋಣಿಗಳಿಗೆ ಸಿಗಡಿ ಹಾಗೂ ಮಾಂಜಿ ಮೀನುಗಳು ದೊರೆಯುತ್ತಿವೆ.
ಮೀನುಗಾರಿಕಾ ಇಲಾಖೆಯ ಅಂಕಿಅಂಶಗಳ ಪ್ರಕಾರ, ಆಗಸ್ಟ್ನಲ್ಲಿ 18,000 ಮೆಟ್ರಿಕ್ ಟನ್ ಹಾಗೂ ಸೆಪ್ಟೆಂಬರ್ನಲ್ಲಿ 25,200 ಮೆಟ್ರಿಕ್ ಟನ್ ಮೀನು ಲಭ್ಯವಾಗಿದ್ದು, ಎರಡು ತಿಂಗಳ ಒಟ್ಟು ಇಳುವರಿ 43,200 ಮೆಟ್ರಿಕ್ ಟನ್ಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 53,757 ಮೆಟ್ರಿಕ್ ಟನ್, 2024-25ರಲ್ಲಿ 45,050 ಮೆಟ್ರಿಕ್ ಟನ್ ಹಾಗೂ 2023-24ರಲ್ಲಿ 44,024 ಮೆಟ್ರಿಕ್ ಟನ್ ಮೀನು ಸಿಕ್ಕಿತ್ತು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ವಾರ್ಷಿಕ ಮೀನು ಲಭ್ಯತೆಯ ಅಂಕಿಅಂಶಗಳನ್ನು ಪರಿಶೀಲಿಸಿದಾಗ ಏರಿಕೆಯ ಪ್ರವೃತ್ತಿ ಕಂಡುಬಂದಿದೆ. 2024-25ರ ಹಣಕಾಸು ವರ್ಷದಲ್ಲಿ 2,220 ಕೋಟಿ ರೂ. ಮೌಲ್ಯದ 1,71,795 ಟನ್ ಮೀನು ಲಭ್ಯವಾಗಿತ್ತು. 2025-26ರಲ್ಲಿ ಇದು 3,856 ಕೋಟಿ ರೂ. ಮೌಲ್ಯದ 1,97,381 ಟನ್ಗೆ ಏರಿಕೆಯಾಗಿದೆ.
ವಾರ್ಷಿಕ ಮೀನು ಲಭ್ಯತೆ ಹೆಚ್ಚುತ್ತಿರುವುದನ್ನು ಗಮನಿಸಿದರೆ, ಪ್ರಸ್ತುತ ಮೀನುಗಾರಿಕಾ ಋತುವಿನಲ್ಲೂ ಉತ್ತಮ ಇಳುವರಿ ಸಿಗಲಿದೆ ಎಂಬ ಭರವಸೆಯನ್ನು ಇಲಾಖೆಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.