ಮಂಗಳೂರು, ಅ.09 (DaijiworldNews/AA): ಆಸ್ತಿಗಾಗಿ ಮಗಳೇ ತಂದೆಯನ್ನು ಕೊಲೆ ಮಾಡಿ, ಮರಣೋತ್ತರ ಪರೀಕ್ಷೆ ನಡೆಸದೇ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ ಎಂಬ ಆರೋಪದ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಸುಮಾರು ಎರಡು ತಿಂಗಳ ಹಿಂದೆ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ಮೃತದೇಹವನ್ನು ಎಫ್ಎಸ್ಎಲ್ ತಪಾಸಣೆಗಾಗಿ ಹೂತುಹಾಕಿದ ಸ್ಥಳದಿಂದ ಹೊರತೆಗೆಯಲು ಮಂಗಳೂರು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಮಂಗಳೂರಿನ ಕೊಟ್ಟಾರ ಫಸ್ಟ್ ಕ್ರಾಸ್ ನಿವಾಸಿ ಆಲ್ಬರ್ಟ್ ರೇಗೋ ಎಂಬುವರು ಜುಲೈ 19ರಂದು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ದೂರಿನ ಪ್ರಕಾರ, ಅವರೊಂದಿಗೆ ವಾಸಿಸುತ್ತಿದ್ದ ಮಗಳು ಮಾಯಾ ರೇಗೋ ಅವರು, ಮರಣೋತ್ತರ ಪರೀಕ್ಷೆ ನಡೆಸದೆ ಹಾಗೂ ಕುಟುಂಬದ ಇತರ ಸದಸ್ಯರಿಗೆ ಮತ್ತು ಸ್ಥಳೀಯರಿಗೆ ಸಾವಿನ ಕುರಿತು ಸೂಕ್ತ ಮಾಹಿತಿ ನೀಡದೆ ಆಪ್ತರ ನೆರವಿನಿಂದ ಅಂತ್ಯಸಂಸ್ಕಾರ ನೆರವೇರಿಸಿದ್ದರು.
ಇದರಲ್ಲಿ ಅಕ್ರಮ ನಡೆದಿದೆ ಎಂದು ಶಂಕಿಸಿದ ಆಲ್ಬರ್ಟ್ ರೇಗೋ ಅವರ ಸ್ನೇಹಿತ ಹ್ಯಾರೋಲ್ಡ್ ಪಿರೇರಾ ಅವರು ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಮಾಯಾ ರೇಗೋ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಆಲ್ಬರ್ಟ್ ರೇಗೋ ಅವರ ಹೆಸರಲ್ಲಿದ್ದ ಆಸ್ತಿಯನ್ನು ಮಗಳ ಹೆಸರಿಗೆ ವರ್ಗಾಯಿಸುವಂತೆ ಒತ್ತಡ ಹೇರಿ ಕಿರುಕುಳ ನೀಡಲಾಗುತ್ತಿತ್ತು ಮತ್ತು ಹಣಕಾಸಿನ ವಿಚಾರಕ್ಕಾಗಿ ಇತರರ ನೆರವಿನಿಂದ ಅವರನ್ನು ಕೊಲೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ, ಈ ಪ್ರಕರಣದಲ್ಲಿ ವೈದ್ಯರೊಬ್ಬರು ಮತ್ತು ಪೊಲೀಸ್ ಸಿಬ್ಬಂದಿಯೊಬ್ಬರು ಶಾಮೀಲಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಆಲ್ಬರ್ಟ್ ರೇಗೋ ಅವರು ಹಿಂದೆ ವಿದೇಶದಲ್ಲಿ ಕೆಲಸ ಮಾಡಿ ಆಸ್ತಿ ಸಂಪಾದಿಸಿದ್ದರು. ಅವರ ಇಬ್ಬರು ಮಕ್ಕಳು ಬೇರೆ ಬೇರೆ ಕಡೆ ವಾಸಿಸುತ್ತಿದ್ದು, ಒಬ್ಬ ಮಗಳು ಮಾತ್ರ ಅವರೊಂದಿಗೆ ವಾಸಿಸುತ್ತಿದ್ದರು. ಆಸ್ತಿ ವಿಚಾರವಾಗಿ ಮಗಳಿಂದ ಎದುರಾಗುತ್ತಿದ್ದ ಕಿರುಕುಳ ಮತ್ತು ತೊಂದರೆಗಳ ಬಗ್ಗೆ ಆಲ್ಬರ್ಟ್ ತಮ್ಮ ಸ್ನೇಹಿತರ ಬಳಿ ತೋಡಿಕೊಂಡಿದ್ದರು ಎಂದು ದೂರುದಾರರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಉರ್ವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ವೈಜ್ಞಾನಿಕ ತಪಾಸಣೆಗಾಗಿ ಕುಂಟಿಕಾನ ಸಮೀಪದ ದೇರೆಬೈಲ್ ಚರ್ಚ್ ಆವರಣದಲ್ಲಿರುವ ಸಮಾಧಿಯಿಂದ ಆಲ್ಬರ್ಟ್ ರೇಗೋ ಅವರ ಮೃತದೇಹವನ್ನು ಹೊರತೆಗೆಯಲು ಕ್ರಮ ಕೈಗೊಳ್ಳಲಾಗಿದೆ.
ಸ್ಥಳಕ್ಕೆ ಎಫ್ಎಸ್ಎಲ್ ತಜ್ಞರು ಹಾಗೂ ಪೊಲೀಸ್ ಸಿಬ್ಬಂದಿ ಆಗಮಿಸಿದ್ದು, ತಪಾಸಣೆಗಾಗಿ ಹೂತುಹಾಕಲಾಗಿದ್ದ ದೇಹದ ಅವಶೇಷಗಳನ್ನು ಹೊರತೆಗೆಯಲಾಗುತ್ತಿದೆ. ಆರೋಪಿ ಮಾಯಾ ರೇಗೋ ಮತ್ತು ದೂರುದಾರರ ಸಮ್ಮುಖದಲ್ಲೇ ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಎಫ್ಎಸ್ಎಲ್ ತಪಾಸಣಾ ವರದಿ ಮತ್ತು ಪೊಲೀಸ್ ತನಿಖೆ ಪೂರ್ಣಗೊಂಡ ನಂತರವಷ್ಟೇ ಆಲ್ಬರ್ಟ್ ರೇಗೋ ಅವರ ಸಾವಿಗೆ ನಿಖರ ಕಾರಣ ಹಾಗೂ ಪ್ರಕರಣದ ನೈಜ ಸತ್ಯಾಂಶ ಬೆಳಕಿಗೆ ಬರಲಿದೆ.