ಮಂಗಳೂರು ಜ 2: ಮಂಗಳೂರು ಮಹಾನಗರ ಪಾಲಿಕೆಯ ಕಾಂಗ್ರೆಸ್ ಆಡಳಿತ ಅವಧಿಯ ಮೀಸಲು ಪಟ್ಟಿ ಹೊರಬಿದ್ದಿದ್ದು ಮೇಯರ್ ಹಾಗೂ ಉಪ ಮೇಯರ್ ಸ್ಥಾನ ಈ ಬಾರಿ ಸಾಮಾನ್ಯ ವರ್ಗದ ಅಭ್ಯರ್ಥಿಯ ಪಾಲಾಗಲಿದೆ. ಇದರ ಬೆನ್ನಲ್ಲೇ ಮನಪಾದಲ್ಲಿ ಮೇಯರ್ ಹಾಗೂ ಉಪ ಮೇಯರ್ ಕುರ್ಚಿ ಹಿಡಿಯಲು ಆಕಾಂಕ್ಷಿಗಳ ನಡುವೆ ಪೈಪೋಟಿಯೂ ಜೋರಾಗಿದೆ.
ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಜ 2 ರ ಸೋಮವಾರ ಪ್ರಕಟಿಸಿದ್ದು, ಇದರೊಂದಿಗೆ ರಾಜಕೀಯ ಲೆಕ್ಕಚಾರವೂ ಪ್ರಾರಂಭವಾಗಿದೆ. ಹಾಲಿ ಮೇಯರ್ ಕವಿತಾ ಸನಿಲ್ ಉಪ ಮೇಯರ್ ರಜನೀಶ್ ಅವಧಿ 2018 ಮಾರ್ಚ್ 9 ಕ್ಕೆ ಕೊನೆಗೊಳ್ಳಲಿದ್ದು, ಮಾ.10 ರ ಒಳಗೆ ಚುನಾವಣೆ ನಡೆದು ಮಹಾಪೌರರು ಹಾಗೂ ಉಪ ಮಹಾಪೌರರ ಆಯ್ಕೆ ಆಗಬೇಕು.
ಒಂದೆಡೆ ವಿಧಾನಸಭೆ ಚುನಾವಣೆ , ಇನ್ನೊಂದೆಡೆ ಸದ್ಯ ಇರುವ ಕಾಂಗ್ರೆಸ್ ಅಧಿಕಾರವಧಿಯಲ್ಲಿ ಇದು ಅಂತಿಮ ವರ್ಷ ಈ ಹಿನ್ನಲೆಯಲ್ಲಿ ರಾಜಕೀಯವಾಗಿ ಲಾಭ ನಷ್ಟದ ಲೆಕ್ಕಾಚಾರ ಹಾಕಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅನಿವಾರ್ಯತೆ ಕಾಂಗ್ರೆಸ್ ಗೆ ಇದೆ. ಇನ್ನು ಮುಂದಿನ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡ ಮುಸ್ಲಿಂ ಸಮುದಾಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.