ಮಂಗಳೂರು, ಅ.12 (DaijiworldNews/AK): ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ SIR ಪ್ರಕ್ರಿಯೆ ಹಾಗೂ ಭಾರತ್ ಜೋಡೋ ಸಂಘಟನೆಯ ಸದಸ್ಯತ್ವ ನೋಂದಣಿ ಕುರಿತು ಪ್ರಗತಿ ಪರಿಶೀಲನಾ ಸಭೆಯು ಮಂಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿʼಸೋಜಾ ಅವರ ನೇತೃತ್ವದಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಶ್ರೀ ಐವನ್ ಡಿʼಸೋಜಾ ಅವರು, ಕರ್ನಾಟಕ ರಾಜ್ಯದ ಯುವಕರನ್ನು ಭಾರತ್ ಜೋಡೋ ಸಂಘಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನಾಗಿ ನೋಂದಾಯಿಸುವ ಕಾರ್ಯಕ್ಕೆ ಕಾರ್ಯಕರ್ತರು ಆದ್ಯತೆ ನೀಡಬೇಕು. ಸಂಘಟನೆಯ ಮೂಲಕ ಯುವಕರಿಗೆ ದೊರೆಯುವ ಪ್ರಯೋಜನಗಳನ್ನು ತಲುಪಿಸಲು ನಗರ ಪ್ರದೇಶಗಳಲ್ಲಿ ಆಸಕ್ತಿಯಿಂದ ಕಾರ್ಯನಿರ್ವಹಿಸಬೇಕು. ಯುವಕರನ್ನು ಸಂಘಟಿಸುವ ಮೂಲಕ ಸಂಘಟನೆಯನ್ನು ಬಲಪಡಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
SIR ಪ್ರಕ್ರಿಯೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಫಾರಂ-7 ಸೇರಿದಂತೆ ಮತದಾರರ ಪಟ್ಟಿಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಈ ವಿಚಾರವಾಗಿ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳಿಗೆ ದೂರುಗಳನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು. ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಅನರ್ಹ ಮತದಾರರು ಪಟ್ಟಿಯಲ್ಲಿ ಸೇರ್ಪಡೆಯಾಗದಂತೆ ಕಾರ್ಯಕರ್ತರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಮತದಾರರ ಪಟ್ಟಿಯಲ್ಲಿನ ಲೋಪದೋಷಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಪ್ರಜಾಪ್ರಭುತ್ವದ ಹಿತವನ್ನು ಕಾಪಾಡಲು ಮುಂದಾಗಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕರಾದ ಶ್ರೀ ಜೆ.ಆರ್. ಲೋಬೋ ಅವರು, SIR ಪ್ರಕ್ರಿಯೆ ಮತ್ತು ಭಾರತ್ ಜೋಡೋ ಸಂಘಟನೆಯ ಬಲವರ್ಧನೆ ಎರಡೂ ಮಹತ್ವದ ವಿಚಾರಗಳಾಗಿದ್ದು, ಕಾರ್ಯಕರ್ತರು ಹೆಚ್ಚಿನ ಮುತುವರ್ಜಿ ವಹಿಸಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಪದ್ಮರಾಜ್ ಪೂಜಾರಿ ಅವರು ಮಾತನಾಡಿ, SIR ಪ್ರಕ್ರಿಯೆ ಹಾಗೂ ಭಾರತ್ ಜೋಡೋ ಸಂಘಟನೆಯ ಸದಸ್ಯತ್ವ ನೋಂದಣಿ ಸಂದರ್ಭದಲ್ಲಿ ಕಂಡುಬರುವ ಲೋಪದೋಷಗಳನ್ನು ಸರಿಪಡಿಸಲು ಕಾರ್ಯಕರ್ತರು ಸಂಘಟಿತವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಪದ್ಮರಾಜ್ ಆರ್. ಪೂಜಾರಿ, ಮಾಜಿ ಶಾಸಕ ಜೆ.ಆರ್. ಲೋಬೋ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಬಿ. ಸಾಲ್ಯಾನ್ ಮತ್ತು ಜೆ. ಅಬ್ದುಲ್ ಸಲೀಂ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, SIR ತರಬೇತುದಾರರಾದ ಅಮಿತಾ ಅಶ್ವಿನ್, ನಾಯಕರಾದ ಶುಭೋದಯ ಆಳ್ವ ಹಾಗೂ ಲಾರೆನ್ಸ್, ಕೋ-ಆರ್ಡಿನೇಟರ್ಗಳು ಮತ್ತು ವಾರ್ಡ್ ಅಧ್ಯಕ್ಷರು.ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.