ಮಂಗಳೂರು, ಅ.12 (DaijiworldNews/AK): ದಸರಾ ಹಬ್ಬದ ಕಾರಣ ಪರೀಕ್ಷೆಯನ್ನು ಮುಂದೂಡಬೇಕೆಂದು ಒತ್ತಾಯಿಸಿ ಸೋಮವಾರ ವಿದ್ಯಾರ್ಥಿಗಳ ಒಂದು ವರ್ಗ ನಡೆಸಿದ ಪ್ರತಿಭಟನೆಯ ನಂತರ, ಸೇಂಟ್ ಆಗ್ನೆಸ್ ಕಾಲೇಜು (ಸ್ವಾಯತ್ತ) ಅಕ್ಟೋಬರ್ 2026 ರ ಅಂತಿಮ ಸೆಮಿಸ್ಟರ್ ಪರೀಕ್ಷಾ ವೇಳಾಪಟ್ಟಿಯ ಕುರಿತು ಸ್ಪಷ್ಟೀಕರಣವನ್ನು ನೀಡಿದೆ .

ಪತ್ರಿಕಾ ಪ್ರಕಟಣೆಯಲ್ಲಿ, ಕಾಲೇಜು ಆಡಳಿತ ಮಂಡಳಿಯುಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ ಯಾವುದೇ ಸಾರ್ವಜನಿಕ ರಜಾದಿನಗಳಲ್ಲಿ ಪರೀಕ್ಷೆಗಳನ್ನು ನಿಗದಿಪಡಿಸಿಲ್ಲ. ಸೆಪ್ಟೆಂಬರ್ 11ರಂದೇ ಕರಡು ವೇಳಾಪಟ್ಟಿ ಪ್ರಕಟಿಸಿ ಆಕ್ಷೇಪಣೆಗೆ 15 ದಿನಗಳ ಕಾಲಾವಕಾಶ ನೀಡಲಾಗಿದ್ದರೂ, ವಿದ್ಯಾರ್ಥಿಗಳಿಂದ ಯಾವುದೇ ಮನವಿ ಸಲ್ಲಿಕೆಯಾಗಿರಲಿಲ್ಲ. ಬಳಿಕ ಸೆಪ್ಟೆಂಬರ್ 26ರಂದು ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಆದರೆ ವಿದ್ಯಾರ್ಥಿಗಳ ಕಳವಳಗಳನ್ನು ಪರಿಗಣಿಸಿ ಮತ್ತು ಶೈಕ್ಷಣಿಕ ವಾತಾವರಣವನ್ನು ಕಾಪಾಡುವ ದೃಷ್ಟಿಯಿಂದ ಅಕ್ಟೋಬರ್ 19 ಹಾಗೂ 22ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಕಾಲೇಜು ತಿಳಿಸಿದೆ.
ಮರುನಿಗದಿಪಡಿಸಿದ ದಿನಾಂಕಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಈ ಪ್ರತಿಭಟನೆಯಲ್ಲಿ ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಿದ್ದರೂ, ಕಾಲೇಜು ಆಡಳಿತವು ಅವರ ಕಳವಳಗಳಿಗೆ ಸಂವಾದ, ಪರಸ್ಪರ ತಿಳುವಳಿಕೆ ಹಾಗೂ ಸದ್ಭಾವನೆಯ ಮನೋಭಾವದಿಂದ ಸ್ಪಂದಿಸಿದೆ.
ಅಶಿಸ್ತು ಅಥವಾ ಕ್ಯಾಂಪಸ್ ಶಾಂತಿಗೆ ಭಂಗ ತರುವ ಯಾವುದೇ ಘಟನೆಗಳನ್ನು ಸಾಂಸ್ಥಿಕ ನಿಯಮಗಳ ಪ್ರಕಾರ ಕಟ್ಟುನಿಟ್ಟಾಗಿ ಎದುರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ . ಇದೇ ವೇಳೆ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಬೆಂಬಲ ನೀಡಿದ್ದಕ್ಕಾಗಿ ಪ್ರಾಂಶುಪಾಲರು ಜಿಲ್ಲಾಧಿಕಾರಿ, ಪೊಲೀಸ್ ಸಿಬ್ಬಂದಿ ಮತ್ತು ಪೋಷಕರ ಸಂಘಕ್ಕೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು .