ಬಂಟ್ವಾಳ, ಅ.14 (DaijiworldNews/TA): ಸಜೀಪಮೂಡದ ಸುಭಾಷ್ ನಗರ ಶ್ರೀ ಶಾರದಾ ಪೂಜಾ ಮಹೋತ್ಸವದ ಶತಮಾನೋತ್ಸವ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಸುಭಾಷ್ ಯುವಕ ಮಂಡಲ ಹಾಗೂ ಶಾರದಾ ಪೂಜಾ ಸಮಿತಿ ಆಶ್ರಯದಲ್ಲಿ ಅಕ್ಟೋಬರ್ 17ರಿಂದ 22ರವರೆಗೆ 6 ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿವೆ.

ಶತಮಾನೋತ್ಸವದ ನೆನಪಿನಲ್ಲಿ ಬಡವರಿಗೆ ಮನೆ, ವೈದ್ಯಕೀಯ ನೆರವು ಹಾಗೂ ಸರಕಾರಿ ಶಾಲೆಗೆ ಕೊಠಡಿ ನಿರ್ಮಿಸಲಾಗಿದೆ. ಅಕ್ಟೋಬರ್ 16ರಂದು ಹೊರೆಕಾಣಿಕೆ ಮೆರವಣಿಗೆ, ಅ. 17ರಂದು ದೇವಿ ಪ್ರತಿಷ್ಠಾಪನೆ ಹಾಗೂ ಅ. 22ರಂದು ವೈಭವದ ಶೋಭಾಯಾತ್ರೆಯೊಂದಿಗೆ ನೇತ್ರಾವತಿ ನದಿಯಲ್ಲಿ ಬಿಂಬ ವಿಸರ್ಜನೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಎನ್. ವಿವೇಕ್ ಶೆಟ್ಟಿ ತಿಳಿಸಿದ್ದಾರೆ.
ಈ ಕುರಿತು ಬಂಟ್ವಾಳ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಈ ಸಂದರ್ಭ ಶ್ರೀ ಶಾರದಾ ಪೂಜಾ ಸಮಿತಿ ಅಧ್ಯಕ್ಷ ಬಿ. ಶೋಭಿತ್ ಪೂಂಜ, ಸುಭಾಷ್ ಯುವಕ ಮಂಡಲ ಅಧ್ಯಕ್ಷ ಎಸ್. ಶ್ರೀಕಾಂತ ಶೆಟ್ಟಿ, ಕೋಶಾಧಿಕಾರಿ ಕೀರ್ತನ್ ಆಳ್ವ ಕಾಂತಾಡಿಗುತ್ತು ಹಾಗೂ ಜೊತೆ ಕಾರ್ಯದರ್ಶಿ ಸುಜೀತ್ ಕುಮಾರ್ ಬೆಂಕ್ಯ ಉಪಸ್ಥಿತರಿದ್ದರು.