ಮಂಗಳೂರು, ಅ.14 (DaijiworldNews/AK): ಶ್ರೀನಿವಾಸ ವಿಶ್ವವಿದ್ಯಾಲಯದ 9ನೇ ವಾರ್ಷಿಕ ಘಟಿಕೋತ್ಸವವು ಅಕ್ಟೋಬರ್ 15, 2026C ಗುರುವಾರದಂದು ಬೆಳಿಗ್ಗೆ 10 ಗಂಟೆಗೆ ಸುರತ್ಕಲ್ನ ಮುಕ್ಕದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಲಿದೆ. ಇದರ ನಂತರ ಅಕ್ಟೋಬರ್ 16, 2026 ರಂದು ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಾಧಿಪತಿಗಳಾದ ದಿವಂಗತ ಡಾ. ಸಿಎ ಎ. ರಾಘವೇಂದ್ರ ರಾವ್ ಅವರ 90ನೇ ಜನ್ಮದಿನೋತ್ಸವದ ಅಂಗವಾಗಿ ‘ಸದ್ಭಾವನಾ ದಿವಸ’ವನ್ನು ಆಚರಿಸಲಾಗುತ್ತದೆ.

9ನೇ ವಾರ್ಷಿಕ ಘಟಿಕೋತ್ಸವದಲ್ಲಿ ಒಟ್ಟು 2,077 ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರಗಳನ್ನು ಸ್ವೀಕರಿಸಲಿದ್ದಾರೆ, ಇದರಲ್ಲಿ ೩೯೫ ಸ್ನಾತಕೋತ್ತರ ಮತ್ತು 1,619 ಪದವಿ ವಿದ್ಯಾರ್ಥಿಗಳು ಸೇರಿದ್ದಾರೆ. ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ವಿಶ್ವವಿದ್ಯಾಲಯವು 177 ರ್ಯಾಂಕ್ಗಳನ್ನು ಘೋಷಿಸಿದ್ದು, ಅತ್ಯುತ್ತಮ ಶೈಕ್ಷಣಿಕ ಸಾಧನೆಗಾಗಿ 37 ವಿದ್ಯಾರ್ಥಿಗಳಿಗೆ ಕುಲಾಧಿಪತಿಗಳ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗುವುದು. ಜೊತೆಗೆ 63 ಸಂಶೋಧಕರಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗುವುದು.
ಘಟಿಕೋತ್ಸವದ ಅಧ್ಯಕ್ಷತೆಯನ್ನು ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿಗಳು ಹಾಗೂ ಮಂಗಳೂರಿನ ಎ. ಶ್ಯಾಮ ರಾವ್ ಫೌಂಡೇಶನ್ನ ಅಧ್ಯಕ್ಷರಾದ ಡಾ. ಎ. ಶ್ರೀನಿವಾಸ ರಾವ್ ವಹಿಸಲಿದ್ದಾರೆ. ಹಿಲಾಲ್ ಇಎಸ್ಜಿ ಲಿಮಿಟೆಡ್ನ ಮುಖ್ಯ ಸಲಹೆಗಾರರು ಹಾಗೂ ಮೌಲಾನಾ ಆಜಾದ್ ನ್ಯಾಷನಲ್ ಉರ್ದು ವಿಶ್ವವಿದ್ಯಾಲಯದ ಮಾಜಿ ಕುಲಾಧಿಪತಿಗಳಾದ ಡಾ. ಝಫರ್ ಯೂನಸ್ ಸರೇಶ್ವಾಲಾ ಮತ್ತು ಕೆಪಿ ಗ್ರೂಪ್ನ ಸಂಸ್ಥಾಪಕರು, ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಫಾರೂಕ್ ಜಿ. ಪಟೇಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಟ್ರಸ್ಟಿ ಸದಸ್ಯರುಗಳಾದ ಶ್ರೀಮತಿ ಎ. ವಿಜಯಲಕ್ಷ್ಮಿ ಆರ್. ರಾವ್, ಪ್ರೊ. ಇಆರ್. ಶ್ರೀಮತಿ ಎ. ಮಿತ್ರಾ ಎಸ್. ರಾವ್, ಶ್ರೀಮತಿ ಪದ್ಮಿನಿ ಕುಮಾರ್, ಕುಮಾರಿ ಮೇಘನಾ ಎಸ್. ರಾವ್, ಕುಮಾರಿ ಸಮನಾ ಎಸ್. ರಾವ್, ಶ್ರೀ ಇಶಾನ್ ಎಸ್. ರಾವ್; ಕುಲಪತಿಗಳಾದ ಡಾ. ಕೆ. ಸತ್ಯನಾರಾಯಣ ರೆಡ್ಡಿ; ಕುಲಸಚಿವರಾದ ಡಾ. ಅನಿಲ್ ಕುಮಾರ್; ಕುಲಸಚಿವರು (ಮೌಲ್ಯಮಾಪನ) ಡಾ. ಶ್ರೀನಿವಾಸ ಮಯ್ಯ ಡಿ.; ಕುಲಸಚಿವರು (ಅಭಿವೃದ್ಧಿ) ಡಾ. ಅಜಯ್ ಕುಮಾರ್; ಮತ್ತು ಕುಲಸಚಿವರು (ಶೈಕ್ಷಣಿಕ) ಡಾ. ಆದಿತ್ಯ ಕುಮಾರ್ ಮಯ್ಯ ಸೇರಿದಂತೆ ಇತರ ಗಣ್ಯರು, ಬೋಧಕ ಸಿಬ್ಬಂದಿ, ಪದವೀಧರರು ಉಪಸ್ಥಿತರಿರುವರು.
ಎರಡನೇ ದಿನವಾದ ಅಕ್ಟೋಬರ್ ೧೬, ೨೦೨೬ ರಂದು ದಿವಂಗತ ಡಾ. ಸಿಎ ಎ. ರಾಘವೇಂದ್ರ ರಾವ್ ಅವರ ೯೦ನೇ ಜನ್ಮದಿನೋತ್ಸವ, ಅವರ ಜೀವನ, ದೃಷ್ಟಿಕೋನ ಮತ್ತು ನಿರಂತರ ಪರಂಪರೆಯನ್ನು ಸ್ಮರಿಸುವ ‘ಸದ್ಭಾವನಾ ದಿವಸ’ ಆಚರಣೆಯೊಂದಿಗೆ ಶ್ರೀನಿವಾಸ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಮತ್ತೊಂದು ಮಹತ್ವದ ದಿನವಾಗಲಿದೆ.
ಅಂದಿನ ಕಾರ್ಯಕ್ರಮದಲ್ಲಿ ಸಂಸ್ಥಾಪಕ ಕುಲಾಧಿಪತಿಗಳಿಗೆ ಸಮರ್ಪಿತವಾದ 'ಸ್ವರ್ಣ ಸ್ಮಾರಕ ಧಾಮ' ಸ್ಮಾರಕವನ್ನು ಉಡುಪಿಯ ಶ್ರೀ ಕಣಿಯೂರು ಮಠದ ಪರಮ ಪೂಜ್ಯ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮವು ಕ್ಯಾಂಪಸ್ನ ‘ಕಾವೇರಿ’ ಕೊಳದಲ್ಲಿ ಪೂಜೆಯೊಂದಿಗೆ ಪ್ರಾರಂಭವಾಗಲಿದ್ದು, ನಂತರ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರಿಂದ ಆಶೀರ್ವಚನ ನೆರವೇರಲಿದೆ. ತದನಂತರ ಶಿಕ್ಷಣ ಮತ್ತು ಸಂಸ್ಥೆಗಳ ನಿರ್ಮಾಣಕ್ಕೆ ದಿವಂಗತ ಡಾ. ಸಿಎ ಎ. ರಾಘವೇಂದ್ರ ರಾವ್ ಅವರು ನೀಡಿದ ಅಮೂಲ್ಯ ಕೊಡುಗೆಗೆ ಗೌರವ ಸಲ್ಲಿಸುವ ರೀತಿಯಲ್ಲಿ ಅವರ ಪ್ರತಿಮೆಯನ್ನು ಅನಾವರಣಗೊಳ್ಳಲಿದೆ.
ಸಮಕಾಲೀನ ಶಿಕ್ಷಣದೊಂದಿಗೆ ಭಾರತದ ಶ್ರೀಮಂತ ಬೌದ್ಧಿಕ, ಸಾಂಸ್ಕೃತಿಕ ಮತ್ತು ದಾರ್ಶನಿಕ ಪರಂಪರೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ವಿಶ್ವವಿದ್ಯಾಲಯದ ಬದ್ಧತೆಯನ್ನು ಬಿಂಬಿಸುವ 'ಭಾರತೀಯ ಜ್ಞಾನ ಪದ್ಧತಿ ವಿಭಾಗ'ದ (Department of Indian Knowledge System) ಉದ್ಘಾಟನೆಗೂ ಈ ಸಂದರ್ಭ ಸಾಕ್ಷಿಯಾಗಲಿದೆ.
ಅಕ್ಟೋಬರ್ ೧೬ರ ಕಾರ್ಯಕ್ರಮವು ಬೆಳಿಗ್ಗೆ ೧೦:೦೦ ಗಂಟೆಗೆ ಮಂಗಳೂರಿನ ಸುರತ್ಕಲ್ನ ಮುಕ್ಕದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರಾರಂಭವಾಗಲಿದೆ. ಈ ಎರಡು ದಿನಗಳ ಕಾರ್ಯಕ್ರಮವು ಶೈಕ್ಷಣಿಕ ಸಾಧನೆಯನ್ನು ಸಂಭ್ರಮಿಸಲಿದೆ, ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಾಧಿಪತಿಗಳ ದೃಷ್ಟಿಕೋನವನ್ನು ಗೌರವಿಸಲಿದೆ ಮತ್ತು ಶೈಕ್ಷಣಿಕ ಶ್ರೇಷ್ಠತೆ, ಸಂಶೋಧನೆ, ನಾವೀನ್ಯತೆ ಹಾಗೂ ಭಾರತದ ಜ್ಞಾನ ಪರಂಪರೆಯ ಸಂರಕ್ಷಣೆಗೆ ಶ್ರೀನಿವಾಸ ವಿಶ್ವವಿದ್ಯಾಲಯದ ಬದ್ಧತೆಯನ್ನು ಪುನರುಚ್ಚರಿಸಲಿದೆ.