ಕಾರ್ಕಳ, ಅ.14 (DaijiworldNews/AA): ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ 51 ವರ್ಷದ ವ್ಯಕ್ತಿಯೊಬ್ಬರ ಮೃತದೇಹ ಬುಧವಾರ ಪತ್ತೆಯಾಗಿದೆ.

ಮೃತರನ್ನು ಕಣಜಾರು ಗ್ರಾಮದ ಕಡೆಬರ್ಕೆ ನಿವಾಸಿ ಸುರೇಶ್ ಶೆಟ್ಟಿ (51) ಎಂದು ಗುರುತಿಸಲಾಗಿದೆ.
ನದಿಯಲ್ಲಿ ಶವವು ಮುಖ ಕೆಳಗಾಗಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸುರೇಶ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಕಣಜಾರಿನ ಕಡೆಬರ್ಕೆಯಲ್ಲಿ ವಾಸಿಸುತ್ತಿದ್ದ ಸುರೇಶ್ ಶೆಟ್ಟಿ ಅವರು ಅಕ್ಟೋಬರ್ 9 ರಂದು ಮಧ್ಯಾಹ್ನ 2 ಗಂಟೆಯಿಂದ ಕಾಣೆಯಾಗಿದ್ದರು ಎನ್ನಲಾಗಿದೆ. ಕಟೀಲು ಕ್ಷೇತ್ರಕ್ಕೆ ತೆರಳಿದ್ದ ಅವರು, ಅಲ್ಲಿನ ಸಂಬಂಧಿಕರೊಬ್ಬರ ಅಂಗಡಿಯಲ್ಲಿ ತಮ್ಮ ಬ್ಯಾಗ್ ಇಟ್ಟು ನಂತರ ನಾಪತ್ತೆಯಾಗಿದ್ದರು. ಇದೀಗ ಅವರ ಮೃತದೇಹ ಎಣ್ಣೆಹೊಳೆ ಸೇತುವೆ ಬಳಿ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಂಬಂಧಿಕರು ಮೃತದೇಹವನ್ನು ಗುರುತಿಸಿದ್ದಾರೆ.
ಅವರು ಸೇತುವೆಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಕಾರ್ಕಳ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.