ಮಂಗಳೂರು, ಅ.14 (DaijiworldNews/AK):ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿಯ ವತಿಯಿಂದ ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಖಾಸಗಿ ವಾಹನಗಳಲ್ಲಿ ನಿಯಮಬಾಹಿರವಾಗಿ ಶಾಲಾ ಮಕ್ಕಳನ್ನು ಸಾಗಿಸುತ್ತಿರುವ ವಾಹನಗಳ ವಿರುದ್ಧ ವಿಶೇಷ ತಪಾಸಣೆ ನಡೆಸಿ ಪ್ರಕರಣ ದಾಖಲಿಸಲಾಗಿದೆ.

ಈ ಕಾರ್ಯಾಚರಣೆಯ ಸಂದರ್ಭದಲ್ಲಿ ನಿಯಮಬಾಹಿರವಾಗಿ ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಸುಮಾರು 30 ವಾಹನಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಸಂಬಂಧಪಟ್ಟ ವಾಹನಗಳ ಮಾಲೀಕರಿಗೆ ವಾಹನಗಳ ನೋಂದಣಿಯನ್ನು ಅಮಾನತುಗೊಳಿಸಬಾರದು ಎಂಬುದಕ್ಕೆ ಕಾರಣಗಳನ್ನು ತಿಳಿಸುವಂತೆ ನೋಟಿಸ್ಗಳನ್ನು ಜಾರಿಗೊಳಿಸಲಾಗಿದೆ.
ಶಾಲಾ ಮಕ್ಕಳ ಸುರಕ್ಷತೆ ಸಾರಿಗೆ ಇಲಾಖೆಯ ಪ್ರಮುಖ ಆದ್ಯತೆಯಾಗಿದ್ದು, ನಿಯಮಬಾಹಿರವಾಗಿ ಮಕ್ಕಳನ್ನು ಸಾಗಿಸುವ ವಾಹನಗಳ ವಿರುದ್ಧ ಮುಂದಿನ ದಿನಗಳಲ್ಲಿಯೂ ತಪಾಸಣೆ ಹಾಗೂ ಜಾರಿ ಕಾರ್ಯಾಚರಣೆ ಮುಂದುವರಿಸಲಾಗುತ್ತದೆ ಎಂದು ಮಂಗಳೂರು ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.