ಉಳ್ಳಾಲ, ಅ.15 (DaijiworldNews/TA): ತೊಕ್ಕೊಟ್ಟು ಸಮೀಪದ ಕುತ್ತಾರಿನಿಂದ ಎಲ್ಯಾರ್ ಪದವಿನತ್ತ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಕುತ್ತಾರು ಜಂಕ್ಷನ್ ಕಡಿದಾದ ತಿರುವು ಹಾಗೂ ಹದಗೆಟ್ಟ ರಸ್ತೆಯಿಂದಾಗಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.

ಈ ಭಾಗದಲ್ಲಿ ಪದೇ ಪದೇ ವಾಹನ ದಟ್ಟಣೆ ಉಂಟಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ರಸ್ತೆಯಲ್ಲಿ ಖಾಸಗಿ ಬಸ್ ಗಳು, ಶಾಲಾ-ಕಾಲೇಜು ವಾಹನಗಳು, ಗೂಡ್ಸ್ ವಾಹನಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಪ್ರತಿನಿತ್ಯ ಸಂಚರಿಸುತ್ತವೆ. ಅಲ್ಲದೆ, ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ ನೀಡುವ ನೂರಾರು ಭಕ್ತರು ಹಾಗೂ ವಾಹನಗಳೂ ಇದೇ ರಸ್ತೆಯನ್ನು ಅವಲಂಬಿಸಿವೆ.
ರಸ್ತೆಯಲ್ಲಿರುವ ಕಡಿದಾದ ತಿರುವು, ಹದಗೆಟ್ಟ ರಸ್ತೆ ಹಾಗೂ ವಾಹನಗಳ ದಟ್ಟಣೆಯಿಂದಾಗಿ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಮತ್ತೊಂದೆಡೆ, ಪಾದಚಾರಿಗಳಿಗೆ ಸುರಕ್ಷಿತವಾಗಿ ನಡೆದಾಡಲು ಫುಟ್ಪಾತ್ ವ್ಯವಸ್ಥೆಯೂ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ರಸ್ತೆಯ ತಿರುವಿನ ಸಮಸ್ಯೆ, ರಸ್ತೆ ದುರಸ್ತಿ ಹಾಗೂ ಪಾದಚಾರಿಗಳ ಸುರಕ್ಷತೆಯ ಬಗ್ಗೆ ಗಮನಹರಿಸಬೇಕು. ತಾತ್ಕಾಲಿಕ ದುರಸ್ತಿಗೆ ಸೀಮಿತವಾಗದೆ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕೆಂದು ಸಂಘ ಹಾಗೂ ಸ್ಥಳೀಯ ಸಾರ್ವಜನಿಕರು ಆಗ್ರಹಿಸಿದ್ದಾರೆ.