ಮಂಗಳೂರು,ಅ.15 (DaijiworldNews/AK): ಅಶಕ್ತರಿಗೆ ನೆರವು, ಸಮಾಜಮುಖಿ ಸೇವಾ ಕಾರ್ಯಗಳ ಉದ್ಘಾಟನೆ ಹಾಗೂ ಉಡುಪಿ ಜಿಲ್ಲಾಡಳಿತಕ್ಕೆ ವಾಹನ ಹಸ್ತಾಂತರ ಕಾರ್ಯಕ್ರಮವು ಗುರುವಾರ ಎಸ್ಸಿಡಿಸಿಸಿ ಬ್ಯಾಂಕ್ನ ಸಭಾಂಗಣದಲ್ಲಿ ನಡೆಯಿತು.













ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಶುಭ ಹಾರೈಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ವಿಜಯದಶಮಿ ಹಾಗೂ ನವರಾತ್ರಿ ಪರ್ವಕಾಲವು ಸಮಾಜದಲ್ಲಿ ಶಕ್ತಿ, ಪ್ರೇರಣೆ ಮತ್ತು ಒಗ್ಗಟ್ಟನ್ನು ಮೂಡಿಸುವ ಮಹತ್ವದ ಸಂದರ್ಭವಾಗಿದೆ ಎಂದು ಹೇಳಿದರು.
“ನವರಾತ್ರಿ ಉತ್ಸವವು ಪಂಚ ಮಹಾಪರ್ವಗಳಲ್ಲಿ ಅತ್ಯಂತ ಮಹತ್ವದ್ದಾಗಿದೆ. ಉತ್ಸವಗಳು ಜನರಲ್ಲಿ ಹರ್ಷ, ಉಲ್ಲಾಸ ತುಂಬುವುದರ ಜೊತೆಗೆ ಸಮಾಜದ ಒಗ್ಗಟ್ಟಿಗೂ ಸಹಕಾರಿಯಾಗುತ್ತವೆ. ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಂತಹ ಮಹನೀಯರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ. ಅವರ ಆರೋಗ್ಯ, ಆಯಸ್ಸು ಹಾಗೂ ಉತ್ತಮ ಭವಿಷ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅವರು ಸಮಾಜದೊಂದಿಗೆ ನೂರು ಕಾಲ ಸುಖವಾಗಿ ಬಾಳಲಿ. ದೇವರ ಸೇವೆ ಮತ್ತು ಸಮಾಜ ಸೇವೆ ಒಂದಕ್ಕೊಂದು ಪೂರಕವಾಗಿವೆ” ಎಂದರು.
ದೇವಸ್ಥಾನಗಳಿಂದ ಹೂವುಗಳನ್ನು ಗೌರವಯುತವಾಗಿ ಸಂಗ್ರಹಿಸಲು ಬ್ಯಾಂಕ್ ವತಿಯಿಂದ ನೀಡಿರುವ ವಾಹನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅವರು ಆಶಿಸಿದರು. ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಯಾವುದೇ ಜಾತಿ, ಸಮುದಾಯ ಅಥವಾ ಕುಟುಂಬಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಸಮಾಜದ ಎಲ್ಲ ವರ್ಗದ ಜನರೊಂದಿಗೆ ಅವರು ಆತ್ಮೀಯ ಸಂಬಂಧ ಹೊಂದಿದ್ದಾರೆ ಎಂದು ಹೇಳಿದರು.
“ಅವರ ಸುಖದಲ್ಲಿ ಸಂತೋಷಪಡುವುದು ಹಾಗೂ ಕಷ್ಟದಲ್ಲಿ ಜೊತೆಯಾಗಿ ನಿಲ್ಲುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅವರ ಆರೋಗ್ಯ ವೃದ್ಧಿಸಿ, ನೂರು ಕಾಲ ಬಾಳುವಂತಾಗಲಿ. ಅವರ ಮಾರ್ಗದರ್ಶನ ಸಮಾಜಕ್ಕೆ ನಿರಂತರವಾಗಿ ದೊರೆಯಲಿ” ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕೆಎಂಎಫ್ ನಿರ್ದೇಶಕ ರವಿರಾಜ್ ಹೆಗ್ಡೆ, ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಭಾಸ್ಕರ್ ಹೆಗ್ಡೆ ಹಾಗೂ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಿನಾಥ್ ಭಟ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ಅಶಕ್ತರಿಗೆ ನೆರವು ನೀಡುವ ಮೂಲಕ ಸಮಾಜಮುಖಿ ಕಾರ್ಯಗಳಿಗೆ ಉತ್ತೇಜನ ನೀಡುವುದರ ಜೊತೆಗೆ, ದೇವಸ್ಥಾನಗಳಿಂದ ಹೂವುಗಳ ಸಂಗ್ರಹಕ್ಕೆ ವಾಹನ ಕೊಡುಗೆ ನೀಡಿರುವುದು ಕಾರ್ಯಕ್ರಮದ ಪ್ರಮುಖ ಅಂಶವಾಗಿತ್ತು.