ಮಂಗಳೂರು, ಜ 12: ಬಿಜೆಪಿ ಡ್ರಾಮಾ ಕಂಪೆನಿ. ಈ ಡ್ರಾಮಾ ಕಂಪೆನಿಯಲ್ಲಿ ಮೋದಿ ಮಾಲಕ ಮತ್ತು ಅಮಿತ್ ಷಾ ಮ್ಯಾನೇಜರ್ ಆಗಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ವ್ಯಂಗ್ಯ ಮಾಡಿದ್ದಾರೆ.
ನಗರದ ಶಕ್ತಿನಗರದಲ್ಲಿ ಪೊಲೀಸ್ ವಸತಿಗೃಹಕ್ಕೆ ಶಿಲಾನ್ಯಾಸಗೈದು ಮಾತನಾಡಿದ ಅವರು, ಬಿಜೆಪಿಯ ಡ್ರಾಮಾ ಕಂಪೆನಿಯಲ್ಲಿ ಮೋದಿ ಮಾಲಕರಾದರೆ, ಅಮಿತ್ ಷಾ ಮ್ಯಾನೇಜರ್. ಮನೋಹರ್ ಪರಿಕ್ಕರ್, ಯಡಿಯೂರಪ್ಪ ಈ ಕಂಪೆನಿಯ ಪಾತ್ರಧಾರಿಗಳು ಎಂದು ಹೇಳಿದರು.
ಮಹಾದಾಯಿ ವಿಚಾರದಲ್ಲಿ ಬಿಜೆಪಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಬಿಜೆಪಿಯ ಕಂಪೆನಿಯಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಕಾಂಗ್ರೆಸ್ ರೈತರ ಪರವಾಗಿದೆ. ಮುಂದೆಯೂ ಕಾಂಗ್ರೆಸ್ ಪಕ್ಷ ರೈತರ ಪರವಾಗಿಯೇ ಇರುತ್ತದೆ ಎಂದು ತಿಳಿಸಿದರು.
ಈ ಹಿಂದೆ ಸಿಎಂ ಅವರು ಬಿಜೆಪಿಯನ್ನು ಉಗ್ರಗಾಮಿಗಳು ಎನ್ನುವ ಹೇಳಿಕೆ ನೀಡಿದ್ದು, ಈ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಮಲಿಂಗಾ ರೆಡ್ಡಿ, ಸಮಾಜದಲ್ಲಿ ಯಾರು ಭಯದ ವಾತಾವರಣ ನಿರ್ಮಾಣ ಮಾಡುತ್ತಾರೆ ಅವರನ್ನು ಭಯೋತ್ಪಾದಕರು ಎಂದು ಕರೆಯುತ್ತಾರೆ. ಬಿಜೆಪಿ ಪಕ್ಷದ ನಡವಳಿಕೆಯೂ ಹಾಗೇ ಇದೆ ಎಂದು ಹೇಳಿದರು.
ಕರಾವಳಿಯಲ್ಲಿ ಸಂಘಟನೆಗಳು ಮತ್ತು ರಾಜಕೀಯ ಕುಮ್ಮಕ್ಕಿನಿಂದ ಕೋಮು ಗಲಭೆಗಳು ಹೆಚ್ಚಾಗುತ್ತಿದೆ. ಸಂಘಟನೆಗಳನ್ನು ನಿಷೇಧಿಸುವುದಕ್ಕೆ ಯಾವುದೇ ಪ್ರಸ್ತಾಪವಿಲ್ಲ. ಒಂದು ವೇಳೆ ನಿಷೇಧಿಸುವುದಾದರೆ ಎರಡು ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂದು ತಿಳಿಸಿದರು.
ಪಿ.ಎಫ್.ಐ ಮತ್ತು ಸಂಘ ಪರಿವಾರ ಎರಡೂ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದೆ. ಬಲಪಂಥೀಯರು ಮತ್ತು ಪಿ.ಎಫ್.ಐ ಓವರ್ ಆ್ಯಕ್ಟಿಂಗ್ ಮಾಡುತ್ತಿದ್ದು, ಇವರು ಸುಮ್ಮನಾದರೆ ಎಲ್ಲವೂ ಸರಿಯಾಗುತ್ತದೆ. ಎರಡೂ ಸಂಘಟನೆಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.