ಉಡುಪಿ, ಅ.17 (DaijiworldNews/AA): ಕರಾವಳಿ ಪ್ರದೇಶದಲ್ಲಿ ತೀವ್ರ ಮಳೆ ಅಭಾವ, ಸುಡುವ ಬಿಸಿಲು ಹಾಗೂ ಹೆಚ್ಚುತ್ತಿರುವ ಕೀಟಬಾಧೆಯಿಂದಾಗಿ ಸ್ಥಳೀಯ ತರಕಾರಿ ಬೆಳೆ ಸಂಪೂರ್ಣ ಹಾನಿಗೊಳಗಾಗಿದೆ. ಇದರಿಂದಾಗಿ ಮಾರುಕಟ್ಟೆಗೆ ತರಕಾರಿ ಪೂರೈಕೆ ಶೇ. 50 ರಷ್ಟು ಕುಸಿತ ಕಂಡಿದ್ದು, ಬೆಲೆಗಳು ಗಗನಕ್ಕೇರಿವೆ. ಒಂದೆಡೆ ತರಕಾರಿ ಬೆಲೆ ಏರಿಕೆಯಿಂದ ಗ್ರಾಹಕರು ಕಂಗೆಟ್ಟಿದ್ದರೆ, ಇನ್ನೊಂದೆಡೆ ಸಾಲ ಮಾಡಿ ಬೆಳೆ ಬೆಳೆದ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ.

ಕರಾವಳಿ ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುವ ಬದನೆಕಾಯಿ, ಹೀರೆಕಾಯಿ, ಸೋರೆಕಾಯಿ, ಬೆಂಡೆಕಾಯಿ ಹಾಗೂ ವಿವಿಧ ರೀತಿಯ ಸೊಪ್ಪುಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಆದರೆ, ಸಮಯಕ್ಕೆ ಸರಿಯಾಗಿ ಮಳೆಯಾಗದಿರುವುದು ಮತ್ತು ತಾಪಮಾನ ದಿಢೀರ್ ಏರಿಕೆಯಾದ ಕಾರಣ ಗಿಡಗಳು ಬಾಡಿಹೋಗುತ್ತಿವೆ. ಇದರ ಜೊತೆಗೆ ಕೀಟಬಾಧೆಯೂ ಹೆಚ್ಚಾಗಿದ್ದು, ಗಿಡಗಳ ಬೆಳವಣಿಗೆ ಕುಂಠಿತಗೊಂಡು ಇಳುವರಿ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಶೇಕಡಾ 50 ರಷ್ಟು ಕುಸಿದ ಸ್ಥಳೀಯ ತರಕಾರಿ ಪ್ರಮಾಣ
ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಸ್ಥಳೀಯ ರೈತರಿಂದ ಮಾರುಕಟ್ಟೆಗೆ ಪೂರೈಕೆಯಾಗುವ ತರಕಾರಿಗಳ ಪ್ರಮಾಣವು ಸುಮಾರು ಅರ್ಧದಷ್ಟು ಕುಸಿದಿದೆ. ಸ್ಥಳೀಯವಾಗಿ ಬೆಳೆಯುವ ತರಕಾರಿ ಸಿಗದಿರುವುದರಿಂದ, ಮಾರುಕಟ್ಟೆಯ ಬೇಡಿಕೆ ಪೂರೈಸಲು ವರ್ತಕರು ಚಿಕ್ಕಮಗಳೂರು, ಹಾಸನ ಹಾಗೂ ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳಿಂದ ತರಕಾರಿ ತರಿಸುವುದು ಅನಿವಾರ್ಯವಾಗಿದೆ.
ಬೆಲೆ ಏರಿಕೆಗೆ ಗ್ರಾಹಕರು ಕಂಗಾಲು; ನಷ್ಟದಲ್ಲಿ ರೈತರು
ಸ್ಥಳೀಯ ತರಕಾರಿಗಳ ಅಭಾವದಿಂದಾಗಿ ಬೆಲೆಗಳು ಶೇಕಡಾ 50 ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ಕುಟುಂಬದ ದಿನನಿತ್ಯದ ಆಯವ್ಯಯಕ್ಕೆ ಪೆಟ್ಟು ಬಿದ್ದಿದೆ. ಇನ್ನೊಂದೆಡೆ, ಬ್ಯಾಂಕ್ ಹಾಗೂ ಕೈಸಾಲ ಮಾಡಿ ಬೆಳೆ ಬೆಳೆದಿದ್ದ ರೈತರಿಗೆ ಸರಿಯಾದ ಇಳುವರಿ ಸಿಗದೆ, ಬೆಳೆ ನಷ್ಟವಾಗಿ ಜೀವನೋಪಾಯವೇ ಕಷ್ಟಕರವಾಗಿದ್ದು, ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ.
ತರಕಾರಿ ಖರೀದಿಸುವುದೇ ಸವಾಲಾಗಿದೆ
ಮಾರುಕಟ್ಟೆಯಲ್ಲಿ ಕಳೆದ ಕೆಲವು ವಾರಗಳಿಂದ ಸ್ಥಳೀಯ ತರಕಾರಿಗಳು ಸಿಗುವುದೇ ಅಪರೂಪವಾಗಿದೆ. ಒಂದು ವೇಳೆ ತರಕಾರಿ ಸಿಕ್ಕರೂ ಅದರ ಬೆಲೆ ಕೇಳಿದರೆ ಶಾಕ್ ಆಗುತ್ತದೆ. ಹೊರ ಜಿಲ್ಲೆಗಳಿಂದ ಬರುವ ತರಕಾರಿಗಳಲ್ಲಿ ನಮ್ಮ ಕರಾವಳಿಯ ಸ್ಥಳೀಯ ತರಕಾರಿಗಳಷ್ಟು ರುಚಿ ಇರುವುದಿಲ್ಲ. ಬೆಲೆ ಏರಿಕೆಯಿಂದ ದಿನನಿತ್ಯದ ಮನೆ ಖರ್ಚು ನಿಭಾಯಿಸುವುದು ದೊಡ್ಡ ಸವಾಲಾಗಿದೆ" ಎಂದು ಗೃಹಿಣಿ ಕಾವ್ಯ ಅಳಲು ತೋಡಿಕೊಂಡಿದ್ದಾರೆ.
ಗ್ರಾಹಕರ ಬೇಡಿಕೆ ಪೂರೈಸಲು ವರ್ತಕರ ಪರದಾಟ
ಹಿರಿಯಡ್ಕದ ತರಕಾರಿ ವ್ಯಾಪಾರಿ ಕರುಣಾಕರ ಪೂಜಾರಿ ಮಾತನಾಡಿ, "ಸ್ಥಳೀಯ ತರಕಾರಿಗಳ ಅಭಾವ ಮತ್ತು ಬೆಲೆ ಏರಿಕೆಯಿಂದ ಗ್ರಾಹಕರ ಬೇಡಿಕೆ ಪೂರೈಸಲು ಕಷ್ಟವಾಗುತ್ತಿದೆ. ಗ್ರಾಹಕರು ಹೆಚ್ಚಾಗಿ ಸ್ಥಳೀಯ ಬೆಳೆಗಳನ್ನೇ ಕೇಳುತ್ತಾರೆ. ನವರಾತ್ರಿ ಹಬ್ಬದ ಸೀಸನ್ ಆಗಿರುವುದರಿಂದ ಬೇಡಿಕೆಯೂ ಹೆಚ್ಚಾಗಿದೆ" ಎಂದರು.
ಕಾಡುಪ್ರಾಣಿ, ಪಕ್ಷಿಗಳ ಕಾಟ: ರೈತರಿಗೆ ಹೆಚ್ಚಿದ ಸಂಕಷ್ಟ
ಪೆರ್ಡೂರಿನ ರೈತ ಅರವಿಂದ ಹೆಬ್ಬಾರ್ ಮಾತನಾಡಿ, "ತೀವ್ರ ಬಿಸಿಲು ತರಕಾರಿ ಗಿಡಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಇಳುವರಿ ಕಡಿಮೆಯಾಗಿದೆ. ಇದರ ಜೊತೆಗೆ ಕಾಗೆ, ನವಿಲು, ಗಿಳಿ, ಪಾರಿವಾಳ, ಕಾಡು ಹಂದಿ, ಅಳಿಲು ಮತ್ತು ಕೋತಿಗಳ ಕಾಟವೂ ಗಣನೀಯವಾಗಿ ಹೆಚ್ಚಾಗಿದೆ. ತರಕಾರಿ ಬೆಳೆಗಳು ಹಾಗೂ ಭತ್ತದ ತೆನೆಗಳನ್ನು ಈ ದಾಳಿಗಳಿಂದ ಕಾಪಾಡಿಕೊಳ್ಳುವುದು ಒಂದು ಸವಾಲಾಗಿ ಪರಿಣಮಿಸಿದೆ" ಎಂದು ಅವರು ಹೇಳಿದರು.