ಮಂಗಳೂರು/ಉಡುಪಿ, ಅ.17 (DaijiworldNews/AA): ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಾದ್ಯಂತ ಶುಕ್ರವಾರ ರಾತ್ರಿ ಹಾಗೂ ಶನಿವಾರ ಮುಂಜಾನೆ ಸಿಡಿಲು, ಮಿಂಚು ಸಹಿತ ಭಾರಿ ಮಳೆ ಮುಂದುವರಿದಿದೆ. ಈ ಮಳೆಯು ತಾಪಮಾನ ಕೊಂಚ ತಣ್ಣಗಾದರೂ, ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಜನರು ಪರದಾಡುವಂತಾಯಿತು.

ಉಡುಪಿ ಜಿಲ್ಲೆಯಲ್ಲಿ ಗುರುವಾರ ರಾತ್ರಿಯಿಂದ ಆರಂಭವಾದ ಭಾರಿ ಮಳೆ ಶುಕ್ರವಾರ ಬೆಳಗಿನವರೆಗೂ ಸುರಿದಿದ್ದು, ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಗ್ಗೆ ಮತ್ತೆ ಭಾರೀ ಮಳೆ ವರದಿಯಾಗಿದೆ. ಕಾರ್ಕಳ, ಉಡುಪಿ, ಬ್ರಹ್ಮಾವರ ಹಾಗೂ ಕಾಪು ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದೆ.
ಎರಡು ಮನೆಗಳಿಗೆ ಹಾನಿ
ಕಾರ್ಕಳ ತಾಲೂಕಿನಲ್ಲಿ ಭಾರಿ ಮಳೆಯಿಂದಾಗಿ ಎರಡು ಮನೆಗಳಿಗೆ ಹಾನಿಯಾಗಿದೆ. ದುರ್ಗಾ ಗ್ರಾಮದ ಜಯಪಾಲ್ ಎಂಬುವರ ಮನೆ ಮತ್ತು ತೋಟಕ್ಕೆ ಮಧ್ಯರಾತ್ರಿ ಸಿಡಿಲು ಬಡಿದು ತೋಟಗಾರಿಕಾ ಬೆಳೆಗಳಿಗೆ ಅಪಾರ ಹಾನಿಯಾಗಿದೆ. ಇದರಿಂದ ಸುಮಾರು 1 ಲಕ್ಷಕ್ಕೂ ಹೆಚ್ಚು ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಕಾರ್ಕಳ ತಾಲೂಕಿನ ಕುಕ್ಕುಂದೂರಿನ ದುರ್ಗಿ ಎಂಬುವರ ಮನೆಗೆ ಗುರುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಭಾಗಶಃ ಹಾನಿಯಾಗಿದೆ. ಈ ಘಟನೆಯಿಂದ 20,000 ರೂಪಾಯಿಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ನಿರಂತರ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದ್ದರಿಂದ, ಸೆಕೆಯ ವಾತಾವರಣದಲ್ಲಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು. ಅನೇಕ ಕಡೆಗಳಲ್ಲಿ ಶನಿವಾರ ಬೆಳಗ್ಗೆಯಷ್ಟೇ ವಿದ್ಯುತ್ ಸಂಪರ್ಕ ಮರುಸ್ಥಾಪನೆಯಾಯಿತು.
ಮಳೆ ಪ್ರಮಾಣದ ವಿವರ
ಶುಕ್ರವಾರ ಬೆಳಗ್ಗೆ 8.30 ರವರೆಗೆ ದಾಖಲಾದ ಮಳೆ ವರದಿಯಂತೆ ಉಡುಪಿ ಜಿಲ್ಲೆಯಲ್ಲಿ ಸರಾಸರಿ 38.5 ಮಿ.ಮೀ ಮಳೆಯಾಗಿದೆ. ಕಾರ್ಕಳ ತಾಲೂಕಿನಲ್ಲಿ 57.2 ಮಿ.ಮೀ (ಅತಿ ಹೆಚ್ಚು) ಉಡುಪಿ ತಾಲೂಕಿನಲ್ಲಿ 51.9 ಮಿ.ಮೀ, ಕಾಪು ತಾಲೂಕಿನಲ್ಲಿ 50.8 ಮಿ.ಮೀ, ಬ್ರಹ್ಮಾವರ ತಾಲೂಕಿನಲ್ಲಿ 50.4 ಮಿ.ಮೀ, ಹೆಬ್ರಿ ತಾಲೂಕಿನಲ್ಲಿ 38.3 ಮಿ.ಮೀ, ಕುಂದಾಪುರ ತಾಲೂಕಿನಲ್ಲಿ 23.2 ಮಿ.ಮೀ, ಬೈಂದೂರು ತಾಲೂಕಿನಲ್ಲಿ 19.1 ಮಿ.ಮೀ ಮಳೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುರುವಾರ ರಾತ್ರಿಯಿಂದ ಶುಕ್ರವಾರ ಮಧ್ಯಾಹ್ನದವರೆಗೆ ಬಿಟ್ಟುಬಿಟ್ಟು ಭಾರಿ ಮಳೆಯಾಗಿದೆ. ಗುರುವಾರ ಮಧ್ಯರಾತ್ರಿಯಿಂದ ಎರಡು ಮೂರು ಗಂಟೆಗಳ ಕಾಲ ಸುರಿದ ಭಾರಿ ಮಳೆಯ ನಂತರ ಶುಕ್ರವಾರ ಬೆಳಗ್ಗೆ ಮೋಡಕವಿದ ತಂಪಾದ ವಾತಾವರಣವಿತ್ತು. ಮಧ್ಯಾಹ್ನ ಮತ್ತೆ ಬಿರುಸಿನ ಮಳೆ ಸುರಿಯಿತು. ಆ ನಂತರ ಮೋಡ ಮತ್ತು ಬಿಸಿಲಿನಿಂದ ಕೂಡಿದ ವಾತಾವರಣವಿದ್ದು, ಶುಕ್ರವಾರ ರಾತ್ರಿ ಮತ್ತೆ ಆರಂಭವಾದ ಭಾರಿ ಮಳೆ ಶನಿವಾರ ಬೆಳಗಿನವರೆಗೂ ಮುಂದುವರಿಯಿತು.