ಉಡುಪಿ, ಅ.18 (DaijiworldNews/AA): ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಡುಪಿ-ಉಚ್ಚಿಲ ದಸರಾ 2026ರ ಸಮಾರೋಪದ ಅಂಗವಾಗಿ ಅಕ್ಟೋಬರ್ 21ರಂದು ನಡೆಯಲಿರುವ ಭವ್ಯ ಮೆರವಣಿಗೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತವು ಸಂಚಾರ ನಿಯಮಗಳಲ್ಲಿ ಬದಲಾವಣೆಗಳನ್ನು ಘೋಷಿಸಿದೆ.

ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆಯಿರುವುದರಿಂದ, ಸುಗಮ ಸಂಚಾರ ಹಾಗೂ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಅಕ್ಟೋಬರ್ 21ರಂದು ನಿರ್ದಿಷ್ಟ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಅಕ್ಟೋಬರ್ 11ರಿಂದ ಆರಂಭಗೊಂಡಿರುವ ಉಡುಪಿ-ಉಚ್ಚಿಲ ದಸರಾ ಮಹೋತ್ಸವ ಅಕ್ಟೋಬರ್ 21ರಂದು ಸಮಾಪನಗೊಳ್ಳಲಿದ್ದು, ಅಂದು ನಡೆಯಲಿರುವ ಭವ್ಯ ಮೆರವಣಿಗೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ವಾಹನ ಸಂಚಾರದಲ್ಲಿ ಮಾಡಿರುವ ಬದಲಾವಣೆಗಳು:
- ಉಡುಪಿಯಿಂದ ಮಂಗಳೂರಿನತ್ತ ತೆರಳುವ ಭಾರೀ ವಾಹನಗಳು: ಮಧ್ಯಾಹ್ನ 3ರಿಂದ ರಾತ್ರಿ 11ರವರೆಗೆ ಕಟಪಾಡಿ–ಶಿರ್ವ–ಬೆಳ್ಮಣ್–ಪಡುಬಿದ್ರಿ ಮಾರ್ಗವಾಗಿ ಸಂಚರಿಸಬೇಕು.
- ಉಡುಪಿಯಿಂದ ಬಜ್ಪೆ ವಿಮಾನ ನಿಲ್ದಾಣದತ್ತ ತೆರಳುವ ವಾಹನಗಳು: ಕಟಪಾಡಿ–ಶಿರ್ವ–ಬೆಳ್ಮಣ್–ಮುಂಡ್ಕೂರು ಮಾರ್ಗವನ್ನು ಬಳಸಬೇಕು.
- ಲಾರಿ, ಟ್ಯಾಂಕರ್ ಹಾಗೂ ಇತರ ಭಾರೀ ವಾಹನಗಳು: ಕುಂದಾಪುರ ಮತ್ತು ಉಡುಪಿಯಲ್ಲಿರುವ ಟ್ರಕ್ ಬೇಗಳಲ್ಲಿ ರಾತ್ರಿ 9ರವರೆಗೆ ವಾಹನಗಳನ್ನು ನಿಲುಗಡೆಗೊಳಿಸಿ, ಬಳಿಕ ಪ್ರಯಾಣ ಮುಂದುವರಿಸುವಂತೆ ಸೂಚಿಸಲಾಗಿದೆ.
- ಬೆಂಗಳೂರಿಗೆ ತೆರಳುವ ರಾತ್ರಿ ಸೇವೆಯ ಬಸ್ಗಳು: ಸಂಚಾರ ದಟ್ಟಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಉಡುಪಿಯಿಂದ ರಾತ್ರಿ 9 ಗಂಟೆಯ ಬಳಿಕ ಪ್ರಯಾಣ ಆರಂಭಿಸುವಂತೆ ಸೂಚಿಸಲಾಗಿದೆ.
- ಮಂಗಳೂರು–ಉಡುಪಿ ಮಾರ್ಗದಲ್ಲಿ ಸಂಚರಿಸುವ ಭಾರೀ ವಾಹನಗಳು: ಮಧ್ಯಾಹ್ನ 3ರಿಂದ ರಾತ್ರಿ 11ರವರೆಗೆ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಸಂಚಾರ ನಿಯಂತ್ರಣ ಮತ್ತು ವ್ಯವಸ್ಥಿತ ನಿರ್ವಹಣೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಸಂಚಾರ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು, ಸಾರಿಗೆ ಇಲಾಖೆ ಹಾಗೂ ಇತರ ಇಲಾಖೆಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಸೂಚಿಸಿದೆ.
ದಸರಾ ಮಹೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ವಾಹನ ಸವಾರರು ಸಂಚಾರ ಪೊಲೀಸರ ಸೂಚನೆಗಳನ್ನು ಪಾಲಿಸಬೇಕು. ಪರ್ಯಾಯ ಮಾರ್ಗಗಳನ್ನು ಬಳಸುವ ಮೂಲಕ ಸಂಚಾರ ದಟ್ಟಣೆ ತಪ್ಪಿಸಲು ಸಹಕರಿಸಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.