ಮಂಗಳೂರು, ಅ.18 (DaijiworldNews/TA): ನಗರದ ಫಲ್ನೀರ್ ಜಂಕ್ಷನ್ ನಲ್ಲಿರುವ ಜಿ.ಐ. ಬೇಕರಿ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಮಾನ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಸೂಚನೆಯ ಮೇರೆಗೆ, ಅಕ್ಟೋಬರ್ 17ರಂದು ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.

ಬೇಕರಿ ಆಹಾರ ಉತ್ಪನ್ನಗಳನ್ನು ಮರುಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ತಯಾರಿಕಾ ದಿನಾಂಕ, ಬಳಕೆಯ ಅವಧಿ, ಬ್ಯಾಚ್ ನಂಬರ್ ಹಾಗೂ ಎಫ್ಎಸ್ಎಸ್ಎಐ ಪರವಾನಗಿ ಸಂಖ್ಯೆಯಂತಹ ಅಗತ್ಯ ಮಾಹಿತಿಗಳಿಲ್ಲದ ಆಹಾರ ಉತ್ಪನ್ನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದು ಸೀಜ್ ಮಾಡಿ ಸೀಲ್ ಮಾಡಿದ್ದಾರೆ.
ಆಹಾರ ಸುರಕ್ಷತಾ ನಿಯಮಗಳ ಪಾಲನೆಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಆಹಾರ ಪದಾರ್ಥಗಳನ್ನು ಖರೀದಿಸುವಾಗ ಪ್ಯಾಕೆಟ್ ಮೇಲಿನ ಮಾಹಿತಿಗಳನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ.