ಉಪ್ಪಿನಂಗಡಿ, ಅ.18 (DaijiworldNews/TA): ಬಸ್ ನಿಲ್ದಾಣದ ಬಳಿಯ ಬಿಎಸ್ಎನ್ಎಲ್ ಕಚೇರಿಯ ತಡೆಗೋಡೆ ಪ್ರಯಾಣಿಕರ ತಂಗುದಾಣಕ್ಕೆ ಕುಸಿದು ಬಿದ್ದಿದ್ದು, ಅದೃಷ್ಠಾವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಶನಿವಾರ ರಾತ್ರಿ ನಡೆದಿದೆ.

ಬಿಎಸ್ಸೆನ್ನೆಲ್ ಅಧೀನದ ಕಚೇರಿ ಹಾಗೂ ಟವರ್ ಇರುವ ಪ್ರದೇಶದ ಸುರಕ್ಷತೆಗಾಗಿ 8 ಅಡಿಗಿಂತಲೂ ಎತ್ತರದ ಆವರಣ ಗೋಡೆಯನ್ನು ನಿರ್ಮಿಸಲಾಗಿದ್ದು, ಕಳೆದೆರಡು ದಿನಗಳಲ್ಲಿ ಸುರಿದ ಮಳೆಯಿಂದಾಗಿ ಆವರಣ ಗೋಡೆಯ ಬುಡ ದುರ್ಬಲಗೊಂಡು, ಶನಿವಾರ ರಾತ್ರಿ ಸನಿಹದಲ್ಲೇ ಇದ್ದ ಬಸ್ ನಿಲ್ದಾಣದ ಪ್ರಯಾಣಿಕರು ಕುಳಿತುಕೊಳ್ಳುವ ಕಟ್ಟಡದ ಮೇಲೆ ಕುಸಿದು ಬಿದ್ದಿದೆ. ತಡೆಗೋಡೆ ಕುಸಿತಗೊಂಡಾಗ ಉಂಟಾದ ಶಬ್ದದಿಂದ ಬೆಚ್ಚಿಬಿದ್ದ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ಓಡಿ ಹೋಗಿ ಅಪಾಯದಿಂದ ಪಾರಾಗಿದ್ದಾರೆ.
ಗೋಡೆಯ ಒಂದು ಭಾಗ ಸಂಪೂರ್ಣ ಕುಸಿದು ಬಿದ್ದರೆ ಬಹು ಭಾಗ ಸ್ಥಳದಲ್ಲಿ ಅಳವಡಿಸಲಾಗಿದ್ದ ಬೃಹತ್ ಜಾಹೀರಾತು ಫಲಕದ ಕಬ್ಬಿಣದ ಕಂಬದ ಆಧಾರದಲ್ಲಿ ವಾಲಿ ನಿಂತಿದ್ದು, ಯಾವುದೇ ಸಂದರ್ಭದಲ್ಲಿ ಇಡೀ ತಂಗುದಾಣದ ಕಟ್ಟಡವನ್ನೇ ಹಾನಿಗೊಳಿಸುವ ಸಾಧ್ಯತೆಯ ಭೀತಿ ಮೂಡಿಸಿದೆ. ಇದೇ ಸಂಧರ್ಭದಲ್ಲಿ ಪ್ರಯಾಣಿಕರು ವಿಶ್ರಾಂತಿ ಪಡುವ ತಂಗುದಾಣದ ಮುಂಭಾಗದ ಎಲ್ಲಾ ಪಿಲ್ಲರ್ ಗಳ ಬುಡ ಸಂಪೂರ್ಣ ಟೊಳ್ಳಾಗಿದ್ದು, ಅಪಾಯಕಾರಿ ಸ್ಥಿತಿಯಲ್ಲಿರುವುದನ್ನು ಸ್ಥಳೀಯ ಉದ್ಯಮಿಯೋರ್ವರು ತಿಳಿಸಿದ್ದು, ಪ್ರಯಾಣಿಕರ ವಿಶ್ರಾಂತಿ ಕೊಠಡಿಯೂ ಅಪಾಯ ಸ್ಥಿತಿಯಲ್ಲಿರುವುದು ಕಂಡು ಬಂದಿದೆ.