Karavali
ಕರಾವಳಿ ಜಿಲ್ಲೆಗಳಲ್ಲಿ ದಸರಾ ಸಂಭ್ರಮ; ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಮಂಗಳೂರು
- Mon, Oct 19 2026 08:42:17 AM
-
ಮಂಗಳೂರು/ಉಡುಪಿ, ಅ.19 (DaijiworldNews/AA): ದಸರಾ ಹಬ್ಬದ ಜೊತೆಗೆ ಸಾಲು ಸಾಲು ರಜೆಗಳು ಬಂದಿರುವುದರಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಇನ್ನೊಂದೆಡೆ, ಮಂಗಳೂರು ನಗರವು ತನ್ನ ದೇವಾಲಯಗಳು, ರಸ್ತೆಗಳು, ವೃತ್ತಗಳು ಮತ್ತು ಕಟ್ಟಡಗಳಿಗೆ ಅಳವಡಿಸಲಾದ ಲಕ್ಷಾಂತರ ದೀಪಾಲಂಕಾರಗಳಿಂದ ಪ್ರಕಾಶಮಾನವಾಗಿ ಕಂಗೊಳಿಸುತ್ತಿದೆ. ಭಾರಿ ಸಂಚಾರ ದಟ್ಟಣೆ, ಬಸ್ಗಳಲ್ಲಿ ಕಿಕ್ಕಿರಿದು ತುಂಬಿದ ಪ್ರಯಾಣಿಕರು ಹಾಗೂ ಭಕ್ತರು ಮತ್ತು ಪ್ರವಾಸಿಗರ ಹರಿವು ಕರಾವಳಿಯುದ್ದಕ್ಕೂ ಹಬ್ಬದ ವಾತಾವರಣ ಸೃಷ್ಟಿಸಿದೆ.




ಶನಿವಾರ ಸಂಜೆ ಹಾಗೂ ರಾತ್ರಿ ಮಂಗಳೂರಿನ ಎಂ ಜಿ ರಸ್ತೆ, ಕಂಕನಾಡಿ, ನಂತೂರು, ಪಂಪ್ವೆಲ್, ಸ್ಟೇಟ್ ಬ್ಯಾಂಕ್, ಹಂಪನಕಟ್ಟೆ, ಕೊಟ್ಟಾರ ಚೌಕಿ, ಸುರತ್ಕಲ್, ಕೆ ಎಸ್ ರಾವ್ ರಸ್ತೆ, ಕುದ್ರೋಳಿ ಮತ್ತು ಕಾರ್ ಸ್ಟ್ರೀಟ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಭಾರಿ ವಾಹನ ಸಂಚಾರ ದಟ್ಟಣೆ ಕಂಡುಬಂತು. ಇದರಿಂದ ಅಂಬುಲೆನ್ಸ್ಗಳ ಸಂಚಾರಕ್ಕೂ ಅಡಚಣೆಯುಂಟಾಯಿತು.
ಭಾನುವಾರ ರಜಾದಿನವಾಗಿದ್ದು, ಮಂಗಳವಾರ ಆಯುಧ ಪೂಜೆ ಹಾಗೂ ಬುಧವಾರ ವಿಜಯದಶಮಿ ಹಬ್ಬವಿದೆ. ಕೆಲವು ಖಾಸಗಿ ಸಂಸ್ಥೆಗಳು ಸೋಮವಾರವನ್ನೂ ರಜೆ ಎಂದು ಘೋಷಿಸಿರುವುದರಿಂದ ಉದ್ಯೋಗಿಗಳಿಗೆ ಸತತ ನಾಲ್ಕು ದಿನಗಳ ಸುದೀರ್ಘ ರಜೆ ದೊರೆತಿದೆ. ಇದರಿಂದಾಗಿ ಅನೇಕರು ತಮ್ಮ ಸ್ವಂತ ಊರುಗಳಿಗೆ ತೆರಳಿದರೆ, ಇನ್ನು ಕೆಲವರು ಪ್ರವಾಸ ಮತ್ತು ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗಾಗಿ ಕರಾವಳಿ ಜಿಲ್ಲೆಗಳಿಗೆ ಆಗಮಿಸುತ್ತಿದ್ದಾರೆ. ಇದು ಧಾರ್ಮಿಕ ಕ್ಷೇತ್ರಗಳಲ್ಲಿ ಜನಸಂದಣಿಯನ್ನು ಹೆಚ್ಚಿಸಿದೆ.
ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿರುವ ಮಂಗಳೂರು
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ, ಮಂಗಳಾದೇವಿ ದೇವಸ್ಥಾನ ಸೇರಿದಂತೆ ವಿವಿಧ ದೇವಿಯ ಆಲಯಗಳನ್ನು ವರ್ಣರಂಜಿತ ದೀಪಗಳಿಂದ ಅಲಂಕರಿಸಲಾಗಿದ್ದು, ನವರಾತ್ರಿ ಆಚರಣೆಯ ವೈಭವವನ್ನು ಇಮ್ಮಡಿಗೊಳಿಸಿದೆ. ಮಂಗಳೂರಿನ ಪ್ರಮುಖ ರಸ್ತೆಗಳು, ವೃತ್ತಗಳು ಮತ್ತು ಕಟ್ಟಡಗಳು ದೀಪಾಲಂಕಾರದಿಂದ ಮಿನುಗುತ್ತಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರು ರಾತ್ರಿ ವೇಳೆ ನಗರ ಸಂಚಾರ ನಡೆಸಿ ಈ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಮಂಗಳೂರು ದಸರಾ ಪ್ರಯುಕ್ತ ಮಂಗಳೂರು ಮಹಾನಗರ ಪಾಲಿಕೆಯು ಪ್ರಮುಖ ರಸ್ತೆಗಳು ಮತ್ತು ವೃತ್ತಗಳಲ್ಲಿ ದೀಪಾಲಂಕಾರ ವ್ಯವಸ್ಥೆ ಮಾಡಿದ್ದಾರೆ. ಇನ್ನು ನಾಗರಿಕರು ಹಾಗೂ ಕಟ್ಟಡಗಳ ಮಾಲೀಕರು ತಮ್ಮ ಸ್ವಂತ ವೆಚ್ಚದಲ್ಲಿ ಬೆಳಕಿನ ಅಲಂಕಾರ ಮಾಡಿದ್ದಾರೆ.
ದಸರಾ ಶೋಭಾಯಾತ್ರೆ ಸಾಗುವ ಕುದ್ರೋಳಿ, ಲೇಡಿಹಿಲ್, ಲಾಲ್ಬಾಗ್, ಎಂ ಜಿ ರಸ್ತೆ, ನವಭಾರತ್ ವೃತ್ತ, ಕೆ ಎಸ್ ರಾವ್ ರಸ್ತೆ, ಕೃಷ್ಣ ಭವನ, ಕಾರ್ ಸ್ಟ್ರೀಟ್ ಮತ್ತು ನ್ಯೂ ಚಿತ್ರಾ ಟಾಕೀಸ್ ರಸ್ತೆಗಳಲ್ಲಿ ಸುಂದರ ದೀಪಾಲಂಕಾರ ಮಾಡಲಾಗಿದೆ. ದೀಪಗಳಿಂದ ಅಲಂಕರಿಸಲ್ಪಟ್ಟ ಮರಗಳು, ರಸ್ತೆಬದಿಯ ಕಲಾಕೃತಿಗಳು ಹಾಗೂ ಕಟ್ಟಡಗಳು ಹಬ್ಬದ ಕಳೆಯನ್ನು ಹೆಚ್ಚಿಸಿವೆ.
ಪಂಪ್ವೆಲ್ ಬಳಿ ನಿರ್ಮಿಸಲಾದ ವಿದ್ಯುತ್ ದೀಪಗಳ ಸ್ವಾಗತ ಗೋಪುರವು ನಗರಕ್ಕೆ ಆಗಮಿಸುವವರನ್ನು ಸ್ವಾಗತಿಸುತ್ತಿದ್ದರೆ, ನಾರಾಯಣ ಗುರು ವೃತ್ತವು ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಪ್ರವಾಸಿಗರು ಮತ್ತು ಸ್ಥಳೀಯರು ರಾತ್ರಿ ವೇಳೆ ದೇವಾಲಯಗಳಿಗೆ ಭೇಟಿ ನೀಡುವಾಗ ವೀಡಿಯೊ ಹಾಗೂ ಸೋಶಿಯಲ್ ಮೀಡಿಯಾ ರೀಲ್ಸ್ಗಳನ್ನು ಮಾಡುತ್ತಿರುವುದು ಕಂಡುಬರುತ್ತಿದೆ.
ಇದಲ್ಲದೆ, ಪ್ರವಾಸಿಗರು ಉಚ್ಚಿಲ, ಉಡುಪಿಯ ರಾಜಾಂಗಣ ಮತ್ತು ಮಂಗಳೂರಿನ ಕುದ್ರೋಳಿ ದೇವಾಲಯಗಳಿಗೆ ಭೇಟಿ ನೀಡಿ ನವದುರ್ಗೆಯರ ದರ್ಶನ ಪಡೆಯುತ್ತಿದ್ದಾರೆ.
25 ಕಿ.ಮೀ ವ್ಯಾಪ್ತಿಯಲ್ಲಿ ಕೋಟ್ಯಂತರ ಬಲ್ಬ್ಗಳ ಬೆಳಕು
ಮಂಗಳೂರಿನ ಸುಮಾರು 25 ಕಿಲೋಮೀಟರ್ ವ್ಯಾಪ್ತಿಯಲ್ಲಿ ದೀಪಾಲಂಕಾರ ಮಾಡಲಾಗಿದ್ದು, ಇದಕ್ಕಾಗಿ ಅಂದಾಜು 10 ಕೋಟಿ ಮಿನಿಯೇಚರ್ ಬಲ್ಬ್ಗಳು ಮತ್ತು ಇತರ ವಿದ್ಯುತ್ ಉಪಕರಣಗಳನ್ನು ಬಳಸಲಾಗಿದೆ. ಸೂಕ್ಷ್ಮ ವಿನ್ಯಾಸಗಳಿಂದ ಕೂಡಿದ ದೇವಾಲಯಗಳ ಗೋಪುರಗಳು ಮತ್ತು ಸುತ್ತಮುತ್ತಲಿನ ರಚನೆಗಳು ರಾತ್ರಿ ವೇಳೆ ನಯನಮನೋಹರವಾಗಿ ಕಾಣಿಸುತ್ತಿವೆ.
ಈ ಅಲಂಕಾರದಲ್ಲಿ 2 ಕೋಟಿಗೂ ಹೆಚ್ಚು ಪಿಕ್ಸೆಲ್ ಲೈಟ್ಗಳು, 1 ಕೋಟಿ 9-ವ್ಯಾಟ್ ಬಲ್ಬ್ಗಳು, ಸಾವಿರಾರು ಟ್ಯೂಬ್ಲೈಟ್ಗಳು ಮತ್ತು ಫೋಕಸ್ ಲೈಟ್ಗಳನ್ನು ಬಳಸಲಾಗಿದೆ. ವಿದ್ಯುತ್ ಪೂರೈಕೆಗಾಗಿ ಟ್ರಾನ್ಸ್ಫಾರ್ಮರ್ಗಳು ಮತ್ತು ನೂರಾರು ಜನರೇಟರ್ಗಳನ್ನು ಅಳವಡಿಸಲಾಗಿದೆ.
ಪಾಲಿಕೆಯು ಈ ದೀಪಾಲಂಕಾರದ ಗುತ್ತಿಗೆಯನ್ನು ಬೋಳಾರ ಮೂಲದ 'ಗೀತಾ ಎಲೆಕ್ಟ್ರಿಕಲ್ಸ್' ಸಂಸ್ಥೆಗೆ ನೀಡಿದೆ. ಸಂಸ್ಥೆಯ ಮಾಲೀಕ ಅಶೋಕ್ ಅವರ ಪ್ರಕಾರ, ಈ ಅಲಂಕಾರಿಕ ಕಾಮಗಾರಿಯನ್ನು ಪೂರ್ಣಗೊಳಿಸಲು ಸುಮಾರು ಒಂದು ತಿಂಗಳ ಸಮಯ ಹಿಡಿದಿದೆ.
ಅಸ್ಸಾಂ ಹಾಗೂ ಮಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳ 200ಕ್ಕೂ ಹೆಚ್ಚು ಕಾರ್ಮಿಕರು ದೀಪಗಳನ್ನು ಅಳವಡಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ದೀಪಾಲಂಕಾರವು ಹಬ್ಬದ ಉದ್ದಕ್ಕೂ ಸರಿಯಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು 120ಕ್ಕೂ ಹೆಚ್ಚು ಎಲೆಕ್ಟ್ರಿಷಿಯನ್ಗಳು ಪ್ರತಿದಿನ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 10 ಕೋಟಿ ಮಿನಿಯೇಚರ್ ಲೈಟ್ಗಳು, 2 ಕೋಟಿ ಪಿಕ್ಸೆಲ್ ಬಲ್ಬ್ಗಳು ಮತ್ತು 1 ಕೋಟಿ 9-ವ್ಯಾಟ್ ಬಲ್ಬ್ಗಳನ್ನು ಬಳಸಲಾಗಿದೆ. ಈ ವ್ಯವಸ್ಥೆಯನ್ನು ದಸರಾಗೆ ಮಾತ್ರ ಬಳಸುವುದರಿಂದ ಉಪಗುತ್ತಿಗೆ ನೀಡಲಾಗಿದೆ. ಕೆಲವು ದೀಪಗಳು ಕೆಟ್ಟಾಗ ಅವುಗಳನ್ನು ತೆರವುಗೊಳಿಸಿ ಹೊಸ ದೀಪಗಳನ್ನು ಅಳವಡಿಸಲಾಗುತ್ತದೆ ಎಂದು ಅಶೋಕ್ ತಿಳಿಸಿದ್ದಾರೆ.
ಮಂಗಳಾದೇವಿ ದೇವಸ್ಥಾನದಿಂದ ಮಾರ್ನಮಿಕಟ್ಟೆ; ಎ ಬಿ ಶೆಟ್ಟಿ ವೃತ್ತದಿಂದ ಮಂಕಿಸ್ಟ್ಯಾಂಡ್ ಕ್ರಾಸ್ ರೋಡ್; ರಾಮಲಕ್ಷ್ಮಣ ಹಾಲ್ - ಎಂ ಕೆ ಕೆರೆ ರಸ್ತೆ - ಬೋಳಾರ ಮಾರಿಗುಡಿ ದೇವಸ್ಥಾನ - ಲೆವೆಲ್ ಜಂಕ್ಷನ್ ರಸ್ತೆಗಳಲ್ಲಿ ಪಾಲಿಕೆಯಿಂದ ಸುಂದರ ದೀಪಾಲಂಕಾರ ಮಾಡಲಾಗಿದೆ.
ಹಾಗೆಯೇ, ಬೋಳಾರ ಲೆವೆಲ್ ಜಂಕ್ಷನ್ನಿಂದ ಗುಜ್ಜರಕೆರೆ; ಮೋರ್ಗನ್ಸ್ ಗೇಟ್ - ಮಂಕಿಸ್ಟ್ಯಾಂಡ್ ರಸ್ತೆ - ಜೈಹಿಂದ್ ವೃತ್ತ; ಮಂಗಳಾದೇವಿ ದೇವಸ್ಥಾನದಿಂದ ಬೋಳಾರ ಮುಖ್ಯ ರಸ್ತೆ ಮೂಲಕ ಬೋಳಾರ ಹಳೆ ಕೋಟೆ ದೇವಸ್ಥಾನದವರೆಗೂ ದೀಪಗಳು ಮಿನುಗುತ್ತಿವೆ.
ಮಂಗಳೂರು ವಿಶ್ವವಿದ್ಯಾನಿಲಯ - ಕ್ಲಾಕ್ ಟವರ್ - ಎ ಬಿ ಶೆಟ್ಟಿ ವೃತ್ತ; ಕುದ್ರೋಳಿ ದೇವಸ್ಥಾನ - ಗುರ್ಜಿ ವೃತ್ತ - ನಾರಾಯಣ ಗುರು ವೃತ್ತ - ಲಾಲ್ಬಾಗ್ - ಪಿವಿಎಸ್ - ಗೋವಿಂದ ಪೈ ವೃತ್ತ - ಹಂಪನಕಟ್ಟೆ ವೃತ್ತ; ಹಾಗೂ ಹಂಪನಕಟ್ಟೆ ವೃತ್ತ - ಜಿಎಚ್ಎಸ್ ರಸ್ತೆ - ಜ್ಯುವೆಲ್ಲರಿ ಲೇನ್ - ಕಾರ್ ಸ್ಟ್ರೀಟ್ ದೇವಸ್ಥಾನ - ಉಷಾಕಿರಣ್ ಹೋಟೆಲ್ - ನ್ಯೂ ಚಿತ್ರಾ - ಕುದ್ರೋಳಿ ದೇವಸ್ಥಾನದ ಹಾದಿಯಲ್ಲೂ ದೀಪಾಲಂಕಾರ ರಾರಾಜಿಸುತ್ತಿದೆ.
ಅಲ್ಲದೆ, ಗೋವಿಂದ ಪೈ ವೃತ್ತ - ರಥಬೀದಿ ದೊಂಗರಕೇರಿ ದೇವಸ್ಥಾನ - ನ್ಯೂ ಚಿತ್ರಾ; ಗೋವಿಂದ ಪೈ ವೃತ್ತ - ಮಹಾಮಾಯಿ ದೇವಸ್ಥಾನ - ಕಾರ್ ಸ್ಟ್ರೀಟ್ ದೇವಸ್ಥಾನ - ಶರವು ದೇವಸ್ಥಾನ; ಮತ್ತು ನ್ಯೂ ಚಿತ್ರಾ - ಬಸವನಗುಡಿ - ಉಷಾಕಿರಣ್ ರಸ್ತೆಗಳಲ್ಲೂ ಅಲಂಕಾರ ವಿಸ್ತರಿಸಿದೆ.
ಬಸ್ ನಿಲ್ದಾಣಗಳಲ್ಲಿ ಹರಿದುಬಂದ ಜನಸಾಗರ
ಹಬ್ಬದ ರಜೆಯ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳ ಬಸ್ ನಿಲ್ದಾಣಗಳು ಮತ್ತು ಸಾರ್ವಜನಿಕ ಸಾರಿಗೆಗಳಲ್ಲಿ ಭಾರಿ ಜನಸಂದಣಿ ಕಂಡುಬಂದಿದೆ. ಮಂಗಳೂರಿನಿಂದ ವಿವಿಧ ಸ್ಥಳಗಳಿಗೆ ಸಂಚರಿಸುವ ಖಾಸಗಿ ಹಾಗೂ ಕೆಎಸ್ಆರ್ಟಿಸಿ ಬಸ್ಗಳು ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದವು.
ಹೊರಸಂಸ್ಥೆಗಳಲ್ಲಿ ಉದ್ಯೋಗ ಅಥವಾ ಶಿಕ್ಷಣ ಪಡೆಯುತ್ತಿರುವ ಅನೇಕರು ಹಬ್ಬವನ್ನು ಕುಟುಂಬದೊಂದಿಗೆ ಆಚರಿಸಲು ಮನೆಗೆ ಮರಳಿದ್ದಾರೆ. ಉಡುಪಿ ಮತ್ತು ಮಂಗಳೂರಿನಲ್ಲಿ ಕೆಲಸ ನಿಮಿತ್ತ ನೆಲೆಸಿದ್ದ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಮೂಲದ ಜನರು ತಮ್ಮ ಸ್ವಂತ ಊರುಗಳಿಗೆ ತೆರಳಲು ಬಸ್ ನಿಲ್ದಾಣಗಳಲ್ಲಿ ಸಾಲು ಗಟ್ಟಿ ನಿಂತಿದ್ದ ದೃಶ್ಯಗಳು ಕಂಡುಬಂದವು.
ಬೆಂಗಳೂರಿನಿಂದ ಬರುವ ಪ್ರಯಾಣಿಕರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದ್ದು, ಉಡುಪಿ ಮತ್ತು ಕುಂದಾಪುರ ಸೇರಿದಂತೆ ಕರಾವಳಿ ಭಾಗದ ಬಸ್ ನಿಲ್ದಾಣಗಳು ತುಂಬಿ ತುಳುಕುತ್ತಿದ್ದವು.
50 ಹೆಚ್ಚುವರಿ ಕೆಎಸ್ಆರ್ಟಿಸಿ ಬಸ್ಗಳ ವ್ಯವಸ್ಥೆ
ಹಬ್ಬದ ಜನದಟ್ಟಣೆಯನ್ನು ನಿಯಂತ್ರಿಸಲು, ಬೆಂಗಳೂರು ಕೆಎಸ್ಆರ್ಟಿಸಿಯು ಶುಕ್ರವಾರ ಕರಾವಳಿ ಜಿಲ್ಲೆಗಳಿಗೆ 50 ಹೆಚ್ಚುವರಿ ಬಸ್ಗಳನ್ನು ನಿಯೋಜಿಸಿದೆ. ಇವುಗಳಲ್ಲಿ 33 ಬಸ್ಗಳನ್ನು ಮಂಗಳೂರು ಡಿಪೋಗೆ, 8 ಬಸ್ಗಳನ್ನು ಉಡುಪಿ ಡಿಪೋಗೆ ಮತ್ತು 9 ಬಸ್ಗಳನ್ನು ಕುಂದಾಪುರ ಡಿಪೋಗೆ ಹಂಚಿಕೆ ಮಾಡಲಾಗಿದೆ.
ಮಂಗಳೂರಿನಲ್ಲಿ 20 ಬಸ್ಗಳನ್ನು ಪ್ಯಾಕೇಜ್ ಟೂರ್ಗಳಿಗಾಗಿ ಬಳಸಲಾಗುತ್ತಿದ್ದರೆ, ಎರಡು ಜಿಲ್ಲೆಗಳಲ್ಲಿ ಈಗಾಗಲೇ ಸೇವೆಯಲ್ಲಿರುವ ಬಸ್ಗಳು ನಿಯಮಿತ ಪ್ರಯಾಣಿಕರಿಗೆ ಸೇವೆಯನ್ನು ಮುಂದುವರಿಸಿವೆ. ಪ್ರಸ್ತುತ ಮಂಗಳೂರು, ಉಡುಪಿ ಮತ್ತು ಕುಂದಾಪುರದಿಂದ ಇತರ ಜಿಲ್ಲೆಗಳಿಗೆ ತೆರಳಲು ಹೊಸದಾಗಿ ಹೆಚ್ಚುವರಿ ಬಸ್ಗಳನ್ನು ಪರಿಚಯಿಸಿಲ್ಲ.
ನವರಾತ್ರಿಯ ಕೊನೆಯ ದಿನಗಳಲ್ಲಿ ಬೆಂಗಳೂರು ಮತ್ತು ಇತರ ಜಿಲ್ಲೆಗಳಿಂದ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿರುವುದರಿಂದ ಹೆಚ್ಚುವರಿ ಬಸ್ಗಳನ್ನು ಕಾರ್ಯಾಚರಣೆಗೆ ಇಳಿಸಲು ಕೆಎಸ್ಆರ್ಟಿಸಿ ನಿರ್ಧರಿಸಿದೆ.
ದೀಪಾಲಂಕೃತ ದೇವಾಲಯಗಳು ಹಾಗೂ ರಸ್ತೆಗಳು ರಾತ್ರಿ ವೇಳೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇನ್ನು ರಜಾದಿನಗಳ ಹಿನ್ನೆಲೆಯಲ್ಲಿ ಸಾರಿಗೆ ಕೇಂದ್ರಗಳು ಜನರಿಂದ ತುಂಬಿ ತುಳುಕುತ್ತಿದ್ದು, ಕರಾವಳಿ ಜಿಲ್ಲೆಗಳಲ್ಲಿ ಮಂಗಳೂರು ದಸರಾ ಸಂಭ್ರಮ ಕಳೆಗಟ್ಟಿದೆ.