ಪುತ್ತೂರು, ಅ.19 (DaijiworldNews/AA): ಬಸ್ ನಿಲ್ದಾಣದ ಸಮೀಪವಿರುವ ಬಿಎಸ್ಎನ್ಎಲ್ ಕಚೇರಿಯ ತಡೆಗೋಡೆಯು ಪ್ರಯಾಣಿಕರ ತಂಗುದಾಣದ ಮೇಲೆ ಕುಸಿದುಬಿದ್ದ ಬೆನ್ನಲ್ಲೇ, ಸಂಭವನೀಯ ಅಪಾಯ ತಡೆಗಟ್ಟಲು ಸಲುವಾಗಿ ಬಿಎಸ್ಎನ್ಎಲ್ ಅಧಿಕಾರಿಗಳು ಭಾನುವಾರ ಜೆಸಿಬಿ ಮೂಲಕ ಅಪಾಯಕಾರಿ ಸ್ಥಿತಿಯಲ್ಲಿದ್ದ ಗೋಡೆಯ ಉಳಿದ ಭಾಗವನ್ನು ತೆರವುಗೊಳಿಸಿದರು.

ಶನಿವಾರ ರಾತ್ರಿ ಪ್ರಯಾಣಿಕರ ತಂಗುದಾಣದ ಮೇಲೆ ಕುಸಿದುಬಿದ್ದಿತ್ತು. ಅದೃಷ್ಟವಶಾತ್ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದರು.
ಎಂಟು ಅಡಿಗಳಿಗೂ ಹೆಚ್ಚು ಎತ್ತರವಿದ್ದ ಈ ತಡೆಗೋಡೆಯು ಬಿಎಸ್ಎನ್ಎಲ್ ಕಚೇರಿ ಮತ್ತು ಅದರ ದೂರಸಂಪರ್ಕ ಗೋಪುರವಿರುವ ಆವರಣವನ್ನು ರಕ್ಷಿಸಲು ನಿರ್ಮಿಸಲಾಗಿತ್ತು. ಆದರೆ, ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಗೋಡೆಯ ಅಡಿಪಾಯ ಶಿಥಿಲಗೊಂಡಿತ್ತು. ಪರಿಣಾಮ ಪ್ರಯಾಣಿಕರು ಬಸ್ ಕಾಯುತ್ತಿದ್ದ ತಂಗುದಾಣದ ಮೇಲೆ ಗೋಡೆಯ ಒಂದು ಭಾಗ ಕುಸಿದಿದೆ. ಗೋಡೆಯ ಒಂದು ಭಾಗ ಸಂಪೂರ್ಣವಾಗಿ ಕುಸಿದುಬಿದ್ದರೆ, ಮತ್ತೊಂದು ಭಾಗವು ಜಾಹೀರಾತು ಫಲಕದ ಕಂಬದ ಆಧಾರದ ಮೇಲೆ ತಂಗುದಾಣಕ್ಕೆ ವಾಲಿ ನಿಂತಿತ್ತು.
ಬಸ್ ತಂಗುದಾಣಕ್ಕೆ ಆಧಾರವಾಗಿದ್ದ ಕಂಬಗಳ ಬುಡ ದುರ್ಬಲವಾಗಿದ್ದು, ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಅಪಾಯದಲ್ಲಿದೆ ಎಂಬ ಬಗ್ಗೆ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ರವಿಚಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.