ಉಡುಪಿ, ಅ.19 (DaijiworldNews/TA) : ಬಾಗಿಲುಗಳನ್ನು ಹೊಂದಿರದ ಹಾಗೂ ಹೊಂದಿದ್ದರೂ ಅಳವಡಿಸದೆ ಉಡುಪಿ ನಗರದಲ್ಲಿ ಸಂಚರಿಸುವ ಬಸ್ಗಳನ್ನು ನಿಲ್ಲಿಸಿ, ಪೊಲೀಸ್ ಇಲಾಖೆ ದಂಡ ವಿಧಿಸುವ ಪ್ರಕ್ರಿಯೆ ನಡೆಸುತ್ತಿದ್ದರೂ, ಅದನ್ನು ಲೆಕ್ಕಿಸದೆ ಬಾಗಿಲುಗಳನ್ನು ಅಳವಡಿಸದ ಖಾಸಗಿ ಹಾಗೂ ಸರಕಾರಿ ಬಸ್ಗಳು ನಗರದಲ್ಲಿ ಮತ್ತೆಮತ್ತೆ ರಾಜಾರೋಷವಾಗಿ ಸಂಚರಿಸುತ್ತಿವೆ.

ತಿಂಗಳ ಹಿಂದೆ ಪೊಲೀಸ್ ಇಲಾಖೆಯು ಬಾಗಿಲುಗಳನ್ನು ಹೊಂದಿರದ ಹಾಗೂ ಹೊಂದಿದ್ದರೂ ಅಳವಡಿಸದೆ, ನಿಗದಿತ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ನಗರದಲ್ಲಿ ಸಂಚರಿಸುವ ಖಾಸಗಿ ಬಸ್ಗಳಿಗೆ ಎಚ್ಚರಿಕೆ ನೀಡಿ ದಂಡ ವಿಧಿಸುವ ಅಭಿಯಾನ ಕೈಗೊಂಡಿತ್ತು. ಈ ಅಭಿಯಾನಕ್ಕೆ ಆರ್ಟಿಒ ಇಲಾಖೆಯು ಸಹಕಾರ ನೀಡಬೇಕಾಗಿತ್ತಾದರೂ, ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಈ ಅಭಿಯಾನದಲ್ಲಿ ಪಾಲ್ಗೊಂಡಿಲ್ಲ ಎಂದು ಹೇಳಲಾಗಿದೆ. ಸದ್ಯ ಸಂಚಾರ ಪೊಲೀಸರು ಆಗಾಗ್ಗೆ ದಿನಕ್ಕೆ 4 ರಿಂದ 5 ಇಂತಹ ಬಸ್ಗಳಿಗೆ ದಂಡ ವಿಧಿಸುತ್ತಿದ್ದು, ಈವರೆಗೆ ಸುಮಾರು 45,000 ರೂ. ದಂಡ ಸಂಗ್ರಹವಾಗಿದೆ.
ಆರ್ಟಿಒ ಇಲಾಖೆ ಹಾಗೂ ಪೊಲೀಸ್ ಇಲಾಖೆಯಿಂದಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಖಾಸಗಿ ಹಾಗೂ ಸರಕಾರಿ ಬಸ್ಗಳು ಬಾಗಿಲಿನಲ್ಲಿ ನೇತಾಡುವಷ್ಟು ಪ್ರಯಾಣಿಕರನ್ನು ತುಂಬಿಸಿಕೊಂಡು ಸಂಚರಿಸುತ್ತಿವೆ. ಇದರಿಂದ ಪ್ರಯಾಣಿಕರು ಆಯತಪ್ಪಿ ಬಿದ್ದಲ್ಲಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ. ಪೊಲೀಸ್ ಇಲಾಖೆ, ಜಿಲ್ಲಾಡಳಿತ ಹಾಗೂ ಆರ್ಟಿಒ ಇಲಾಖೆಯು ಈ ಹಿಂದೆಯೇ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ ಎಂಬ ಅಭಿಪ್ರಾಯ ಜನಸಾಮಾನ್ಯರಿಂದ ಕೇಳಿಬಂದಿದೆ.
ಉತ್ಸಾಹ ತೋರದ ಆರ್ಟಿಒ ಅಧಿಕಾರಿಗಳು : ಬಸ್ಗಳಲ್ಲಿ ಬಾಗಿಲು ಅಳವಡಿಸುವುದು ಸೇರಿದಂತೆ ಹಲವು ನಿಯಮಗಳ ಉಲ್ಲಂಘನೆಯಾಗುತ್ತಿದ್ದರೂ, ಆರ್ಟಿಒ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದ್ದಾರೆ. ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರೊಂದಿಗೆ ಆರ್ಟಿಒ ಅಧಿಕಾರಿಗಳು ಅಭಿಯಾನದಲ್ಲೂ ಭಾಗವಹಿಸುತ್ತಿಲ್ಲ. ಖುದ್ದಾಗಿ ಕ್ಷೇತ್ರಕ್ಕಿಳಿದು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರುಗಳೂ ಜನರಿಂದ ಕೇಳಿಬಂದಿವೆ.
ಈ ಹಿಂದೆಯೇ ಜಿಲ್ಲಾಧಿಕಾರಿಗಳು ಪ್ರತಿಯೊಂದು ಬಸ್ನಲ್ಲೂ ಬಾಗಿಲು ಅಳವಡಿಸುವುದು ಕಡ್ಡಾಯ ಎಂದು ಹೇಳಿದ್ದರು. ಎಲ್ಲ ಬಸ್ ಮಾಲಕರಿಗೂ ಸಮಯಾವಕಾಶವನ್ನೂ ನೀಡಲಾಗಿತ್ತು. ಆದರೆ, ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಮುಂದಾಗಿ, ಬಾಗಿಲುಗಳಿಲ್ಲದೆ ಅಥವಾ ನಿಗದಿತ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಸಂಚರಿಸುವ ಬಸ್ಗಳ ವಿರುದ್ಧ ದಂಡ ವಿಧಿಸುವ ಕ್ರಮ ಕೈಗೊಂಡಿದೆ. ಬಸ್ಗಳ ಎಫ್ಸಿ (ಫಿಟ್ನೆಸ್ ಪ್ರಮಾಣಪತ್ರ) ಪರೀಕ್ಷೆಯ ವೇಳೆ ಇಂತಹ ಬಸ್ಗಳಲ್ಲಿ ಬಾಗಿಲುಗಳಿಲ್ಲದಿದ್ದರೆ, ಬಸ್ ಓಡಿಸಲು ಅನುಮತಿ ನೀಡಲಾಗುವುದಿಲ್ಲ. ಮುಂದಿನ ದಿನಗಳಲ್ಲೂ ಅಭಿಯಾನ ಮುಂದುವರಿಸಿ ಈ ಬಸ್ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ, ಉಡುಪಿ ಜಿಲ್ಲೆ ಹರಿರಾಮ್ ಶಂಕರ್ ಎಚ್ಚರಿಕೆ ನೀಡಿದ್ದಾರೆ.